ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಅನಾರೋಗ್ಯ ಸಮಸ್ಯೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯಕ್ಕೆ ಅವರ ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದು, ಶುಕ್ರವಾರ ಹೆಚ್ಚಿನ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಬುಧವಾರ ರಾತ್ರಿ ಲಘು ಹೃದಯಾಘಾತಕ್ಕೊಳಗಾಗಿದ್ದ ಹಂಸಲೇಖ ಅವರನ್ನು ತಕ್ಷಣ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಬುಧವಾರ ರಾತ್ರಿಯಿಂದಲೇ ಅವರನ್ನು ತುರ್ತು ಚಿಕಿತ್ಸಾ ಘಟಕದಲ್ಲಿಟ್ಟು ಅವರ ಆರೋಗ್ಯ ಪರಿಶೀಲಿಸಲಾಗುತ್ತಿದೆ. ಲಘು ಹೃದಯಾಘಾತವಾದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಸ್ತ್ರ ಚಿಕಿತ್ಸೆ ಮಾಡಲು ವೈದ್ಯರು ಮುಂದಾಗಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆಗಳಿವೆ. ಈ ನಡುವೆ ಹಂಸಲೇಖ ಅನಾರೋಗ್ಯಕ್ಕೆ ಒಳಗಾಗಿರುವ ವಿಷಯ ತಿಳಿದು ಅವರ ಆಪ್ತರು, ಬಂಧುಗಳು, ಅಭಿಮಾನಿಗಳು ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.