ಬೆಂಗಳೂರು: ಕುಂಭದ್ರೋಣ ಮಳೆಯಿಂದಾಗಿ ಚೆನ್ನೈ ನಗರ ಜಲಾವೃತ್ತವಾದ ಹಿನ್ನಲೆಯಲ್ಲಿ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಕುಟುಂಬ ಬೆಂಗಳೂರಿನಲ್ಲಿ ಆಶ್ರಯ ಪಡೆದಿದೆ ಎಂದು ತಿಳಿದುಬಂದಿದೆ.
ಜಲಪ್ರಳಯದಿಂದಾಗಿ ನಿರ್ದೇಶಕ ಮಣಿರತ್ನಂ ಅವರ ಚೆನ್ನೈ ನಿವಾಸಕ್ಕೆ ಮಳೆ ನೀರು ನುಗ್ಗಿದ್ದು, ಇನ್ನೆರಡು-ಮೂರು ದಿನದಲ್ಲಿ ಮತ್ತೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನಲೆಯಲ್ಲಿ ನಿರ್ದೇಶಕ ಮಣಿರತ್ನಂ ಮತ್ತು ಅವರ ಪತ್ನಿ ನಟಿ ಸುಹಾಸಿನಿ ಅವರ ಕುಟುಂಬ ಬೆಂಗಳೂರಿನಲ್ಲಿ ಉಳಿದುಕೊಂಡಿದೆ ಎಂದು ತಿಳಿದುಬಂದಿದೆ. ಕಳೆದ ಮೂರು ದಿನಗಳ ಹಿಂದೆಯೇ ಮಣಿರತ್ನಂ ಮತ್ತು ಸುಹಾಸಿನಿ ಅವರು ಬೆಂಗಳೂರಿಗೆ ಆಗಮಿಸಿದ್ದು, ಖ್ಯಾತ ನಟ ಮತ್ತು ವಸತಿ ಸಚಿವ ಅಂಬರೀಶ್ ಅವರ ನಿವಾಸದಲ್ಲಿ ಉಳಿದುಕೊಂಡಿದ್ದಾರೆ.
ಮಣಿರತ್ನಂ ಮತ್ತು ನಟಿ ಸುಹಾಸಿನಿ ಬೆಂಗಳೂರಿಗೆ ಆಗಮಿಸುತ್ತಿರುವುದು ಇದೇ ಮೊದಲೇನಲ್ಲವಾದರೂ, ಈ ಹಿಂದೆ ಬೆಂಗಳೂರಿನಲ್ಲಿ ನಡೆಯುವ ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದರು. ಆದರೆ ಈ ಭಾರಿ ಚೆನ್ನೈನಲ್ಲಿ ಸುರಿದ ಮಹಾ ಮಳೆಗೆ ಅವರ ನಿವಾಸಕ್ಕೆ ನೀರು ನುಗ್ಗಿರುವ ಕಾರಣ ತಾತ್ಕಾಲಿಕವಾಗಿ ಅಂಬರೀಶ್ ಅವರ ನಿವಾಸದಲ್ಲಿ ಉಳಿದುಕೊಂಡಿದ್ದಾರೆ.
ಇನ್ನು ಮಣಿರತ್ನಂ ಮತ್ತು ಸುಹಾಸಿನಿ ಅವರಿಗೆ ಅಂಬರೀಶ್ ಮತ್ತು ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಬಹುಕಾಲದ ಆಪ್ತಗೆಳೆಯರಾಗಿದ್ದು, ಮನೆಗೆ ಬಂದ ಅತಿಥಿಗಳೊಂದಿಗೆ ಫೋಟೋ ತೆಗೆಸಿ ಸುಮಲತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅಲ್ಲದೆ ಚೆನ್ನೈ ಮಳೆ ಬಹುಕಾಲದ ಗೆಳೆಯರನ್ನು ಒಟ್ಟುಗೂಡಿಸಿದ್ದು, ಮಳೆ ಪ್ರಭಾವ ಕಡಿಮೆಯಾದ ಬಳಿಕ ಮಹಾನಗರಿ ತನ್ನ ಹಳೆಯ ಸ್ಥಿತಿಗೆ ಮರಳಲಿದೆ ಎಂದು ಸುಮಲತಾ ಅವರು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.