'ಒಂದು ರೊಮ್ಯಾಂಟಿಕ್ ಕ್ರೈಂ ಕಥೆ' ಚಿತ್ರ ತಂಡ ಪ್ರಚಾರಕ್ಕಾಗಿ, ಒಂದು ವಿಭಿನ್ನ ಕೆಲಸಕ್ಕೆ ಮುಂದಾಗಿದೆ. ಕೇವಲ ಸಿನಿಮಾಕ್ಕೆ ಮಾತ್ರವೇ ಉಪಯೋಗವಾಗುವಂತೆ ಪ್ರಚಾರ ಪ್ರಕ್ರಿಯೆ ನಡೆಸೋದು ರೂಢಿ. ಆದರೆ ಈ ಚಿತ್ರತಂಡ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಅರಿವು ಮಾಡಿಸುವ ಜೊತೆ ಜೊತೆಗೇ ಸಿನಿಮಾ ಪ್ರಚಾರವನ್ನೂ ನಡೆಸುವ ವಿನೂತನ ಪ್ರಯೋಗಕ್ಕೆ ಕೈಹಾಕಿದೆ.
ಇದೇ ಮೊದಲಬಾರಿ `ಒಂದು ರೋಮ್ಯಾಂಟಿಕ್ ಕ್ರೈಂ ಕಥೆ’ ತಂಡ ಪಧಾನಮಂತ್ರಿ ನರೇಂದ್ರ ಮೋದಿ ಅವರ `ಸ್ವಚ್ಛತಾ ಅಭಿಯಾನ’ದ ಬಗ್ಗೆ ಗಮನ ಹರಿಸಿದೆ.
ಕನ್ನಡ ಸಿನೆಮಾ `ಒಂದು ರೊಮ್ಯಾಂಟಿಕ್ ಕ್ರೈಂ ಕಥೆ’ ತಂಡ ಬೆಂಗಳೂರಿನ ಅನೇಕ ಕಾಲೇಜುಗಳಿಗೆ ಭೇಟಿ ನೀಡಿ ಸ್ವಚ್ಛತಾ ಆಂದೋಲನ ಬಗ್ಗೆ ತಿಳಿವಳಿಕೆ ಮೂಡಿಸಿ ಜೊತೆಗೆ ಸಿನಿಮಾದ ಪ್ರಚಾರವನ್ನು ಸಹ ಪಡೆಯುವ ಯೋಜನೆ ರೂಪಿಸಿಕೊಂಡಿದೆ.
ಚಿತ್ರ ತಂಡ ಕಳೆದ ವಾರ ಬೆಂಗಳೂರಿನ ರಾಜಾಜಿನಗರದ ಸರ್ಕಾರಿ ಕಾಲೇಜಿಗೆ ಬೇಟಿ ನೀಡಿ ಕೆಲವು ತಾಸುಗಳನ್ನು ಕಳೆದು ಸ್ವಚ್ಛತಾ ಆಂದೋಲನ ಮಹತ್ವವನ್ನು ತಿಳಿಹೇಳಿದೆ. ಕಾಲೇಜಿನ ಯುವಕ ಯುವತಿಯರಿಗೆ `ಒಂದು ರೋಮಂಟಿಕ್ ಕ್ರೈಂ ಕಥೆ’ ಸಿನಿಮಾದಲ್ಲಿ ಅಡಗಿರುವ ಸಂದೇಶವನ್ನು ತಿಳಿಸುವ ಮೂಲಕ ಪ್ರಶಂಸೆ ಗಿಟ್ಟಿಸಿಕೊಂಡಿದೆ.
ಚಿತ್ರದ ತಂಡ ಮೂರು ವಾರಗಳಲ್ಲಿ ಬೆಂಗಳೂರು ಹಾಗೂ ಮೈಸೂರಿನ ಅನೇಕ ಕಾಲೇಜುಗಳನ್ನು ಬೇಟಿ ಮಾಡಿ ಪ್ರಚಾರದ ಜೊತೆಗೆ `ಸ್ವಚ್ಛತಾ ಆಂದೋಲನ’ ಪರವಾಗಿಯೂ ಕೆಲಸ ಮಾಡಲಿದೆ.
ಈ ಚಿತ್ರದ ಕಥಾ ಹಂದರ ಇಂದಿನ ಸಾಮಾಜಿಕ ಬದುಕಿಗೆ ಸಂಬಂದಪಟ್ಟ ವಿಚಾರ. ದೂರದ ಊರುಗಳಿಂದ ಶ್ರೀಮಂತ ಮನೆತನದ ಮಕ್ಕಳು ವಿದ್ಯೆಗಾಗಿ ಬೇರೆ ರಾಜ್ಯಗಳಿಗೆ ಬಂದು ಸಹವಾಸವನ್ನು ಬದಲಿಸಿಕೊಂಡು ಮೋಜು, ಮಸ್ತಿಯಲ್ಲಿ ತೊಡಗಿಕೊಂಡು ಸಮಾಜಕ್ಕೆ ಒಂದು ಪಿಡುಗಾಗಿ ಬಿಡುವುದು ಈ ಚಿತ್ರದ ಎಳೆ. ತಾರಾಗಣದಲ್ಲಿ `ಗೊಂಬೆಗಳ ಲವ್’ ಸಿನೆಮಾದ ನಾಯಕ ಅರುಣ್, ಅಶ್ವಿನಿ ಚಂದ್ರಶೇಖರ್, ಪೂಜಶ್ರೀ, ಸೋನಲ್, ಪ್ರಿಯಾಂಕ ಶುಕ್ಲ, ವಿನೋದ್, ಅರ್ಚನ ಹಾಗೂ ಇನ್ನಿತರರು ಇದ್ದಾರೆ. ಪ್ರಭು ಛಾಯಾಗ್ರಾಹಕರು. ರಿಶಾಲ್ ಸಾಯಿ ಅವರು ಗೀತ ರಚನೆಕಾರ ಡಾಕ್ಟರ್ ವಿ. ನಾಗೇಂದ್ರ ಪ್ರಸಾದ್ ಅವರ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.