ನಟ ಯಶ್ 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' ಚಿತ್ರದ ಗೆಲುವಿನ ಅಂಬಾರಿಯಲ್ಲಿದ್ದಾರೆ. ಆದರೆ, ಅವರ ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ 'ಮಾಸ್ಟರ್ ಪೀಸ್' ಎಂಬುದು ಎಲ್ಲರಿಗೂ ಗೊತ್ತು. ಮೊದಲ ಬಾರಿಗೆ ಮಂಜು ಮಾಂಡವ್ಯ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ನಾಯಕಿಯಾಗಿ ಸಾನ್ವಿ ಶ್ರೀವಾಸ್ತವ ಆಯ್ಕೆಯಾಗಿದ್ದಾರೆ ಎಂಬುದು ಹೊಸ ಸುದ್ದಿ.
ಅಂದಹಾಗೆ ಈ ಸಾನ್ವಿ ಈಗಾಗಲೇ 'ಚಂದ್ರಲೇಖ' ಚಿತ್ರದಲ್ಲಿ ಮೋಹಿನಿಯಾಗಿ ಪ್ರೇಕ್ಷಕರಿಗೆ ಕಾಟ ಕೊಟ್ಟ ಬ್ಯೂಟಿ. ಓಂ ಪ್ರಕಾಶ್ ರಾವ್ ನಿರ್ದೇಶನ, ಚಿರಂಜೀವಿ ಸರ್ಜಾ ಅಭಿನಯದ ಈ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಹೆಚ್ಚು ಚಿರಪರಿಚಿತವಾದ ಸಾನ್ವಿ, ಈಗ ಯಶ್ ಜತೆ ಕುಣಿಯುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾಳೆ.
ಈ ಹಿಂದೆ ನಟ ಪುನೀತ್ ರಾಜ್‌ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಪ್ರೊಡಕ್ಷನ್ ವಿಜಯ್ ಕಿರ ಗಂದೂರು 'ಮಾಸ್ಟರ್ ಪೀಸ್' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದು ಸಿನಿಮಾ ವ್ಯಾಕರಣ ಬಲ್ಲ ಮಂಜು ಮಾಂಡವ್ಯ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ತುಂಬಾ ನಿರೀಕ್ಷೆ ಇಟ್ಟುಕೊಂಡಿರುವ ಈ ಚಿತ್ರಕ್ಕೆ ಸಾನ್ವಿ ನಾಯಕಿಯಾಗುವುದರ ಮೂಲಕ 'ಚಂದ್ರಲೇಖ' ಚಿತ್ರದ ನಂತರ ಮತ್ತೊಂದು ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುವ ಅವಕಾಶಕ್ಕೆ ಪಾತ್ರವಾಗಿದ್ದಾರೆ. ಚಂದ್ರಲೇಖ ಚಿತ್ರದ ನಂತರ ಸಾಧು ಕೋಕಿಲಾ ನಿರ್ದೇಶನದ, ಸುಮಂತ್ ಶೈಲೇಂದ್ರ ಅಭಿನಯದ ಚಿತ್ರಕ್ಕೂ ಸಾನ್ವಿ ನಾಯಕಿ. ಈ ಚಿತ್ರ ಸದ್ಯಕ್ಕೆ ಚಿತ್ರೀಕರಣದಲ್ಲಿ ಇದೆ.
ಈ ನಡುವೆ 'ಮಾಸ್ಟರ್ ಪೀಸ್'ಗೆ ಈ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಮೂರು ತೆಲುಗು ಹಾಗೂ ತಮಿಳು ಚಿತ್ರದಲ್ಲಿ ನಟಿಸಿರುವ ಸಾನ್ವಿ. ಒಳ್ಳೆಯ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ನಟ ಯಶ್ ಗಾಂಧಿನಗರದ ಗೆಲುವಿನ ಕುದುರೆ ಎನಿಸಿಕೊಂಡಿದ್ದಾರೆ. ಹೀಗಾಗಿ ಮಂಜು ಮಾಂಡವ್ಯ ನಿರ್ದೇಶನದ 'ಮಾಸ್ಟರ್ ಪೀಸ್' ಚಿತ್ರದ ಬಗ್ಗೆ ಒಂದು ಹಂತದ ನಿರೀಕ್ಷೆ ಇದ್ದೇ ಇರುತ್ತದೆ. ಹೀಗಾಗಿ ನಟಿ ಸಾನ್ವಿಗೂ ಹೆಚ್ಚಿನ ಜವಾಬ್ದಾರಿ ಇರುತ್ತದೆ.