ಕನ್ನಡ ಚಿತ್ರಗಳಿಗೆ 2013ರ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ ಅನೌನ್ಸ್ ಆಗಿದೆ. ನಿರೀಕ್ಷೆಯಂತೆ ಕಲಾತ್ಮಕ ಚಿತ್ರಗಳಿಗೆ ಹೆಚ್ಚಿನ ಮನ್ನಣೆ ದೊರೆತಿದೆ.
ಆದರೆ 2013ರ ಸಾಲಿನಲ್ಲಿ ಅತಿ ಹೆಚ್ಚು ಸೌಂಡ್ ಮಾಡಿದ ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಚಿತ್ರಕ್ಕೆ ಒಂದು ಪ್ರಶಸ್ತಿಯ ಭಾಗ್ಯವೂ ಸಿಕ್ಕಿಲ್ಲ ಎಂಬುದು ಚಿತ್ರರಸಿಕರಿಗೆ ಆಶ್ಟರ್ಯ ಮೂಡಿಸಿದೆ. ಏಕೆಂದರೆ ಹೊಸಬರ ತಂಡ ಬಂದು ಇಂಥ ಸಿನಿಮಾ ಕೊಡಬಹುದು ಎಂಬ ನಂಬಿಕೆಯನ್ನು ಬಿತ್ತಿ ಬೆಳೆಸಿದ ಸಿನಿಮಾ ಅದಾಗಿತ್ತು.
ಚಿತ್ರರಂಗಕ್ಕೆ ಒಂದು ಹೊಸ ಲವಲವಿಕೆಯನ್ನು ತಂದುಕೊಟ್ಟಿತ್ತು. ಉತ್ಸಾಹಿ ಯುವಕರ ತಂಡ ಕೆಲಸ ಮಾಡಿತ್ತು. ಆದರೆ ಆ ಸಾಲಿನ ರಾಜ್ಯ ಪ್ರಶಸ್ತಿಯ ಘೋಷಣೆ ಈ ತಂಡದ ಉತ್ಸಾಹಕ್ಕೆ ತಣ್ಣೀರೆರಚಿದೆ. ನಿಮ್ಮ ಸಿನಿಮಾಕ್ಕೆ ಒಂದೂ ಪ್ರಶಸ್ತಿ ಬಂದಿಲ್ಲ, ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಂದು ಚಿತ್ರದ ನಿರ್ಮಾಪಕರಾದ ಹೇಮಂತ್ ಅವರನ್ನು ಕೇಳಿದಾಗ ಅವರಿಂದ ಬಂದ ಅಸಮಾಧಾನದ ಉತ್ತರಗಳು ಇಲ್ಲಿವೆ. ಅದನ್ನು ಅವರ ಸಿಂಪಲ್ ಮಾತಿನಲ್ಲೇ ಓದಿ ನೋಡಿ.
ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಚಿತ್ರರಂಗಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಚಿತ್ರ. ಹೊಸ ಅಲೆ ಸೃಷ್ಠಿ ಮಾಡಿದ ಚಿತ್ರ ಅಂತೆಲ್ಲಾ ಗಾಂಧಿನಗರದ ಮಂದಿ ಮತ್ತು ಸ್ವತಃ ಪ್ರೇಕ್ಷಕರು ಮಾತನಾಡಿದರು. ಆದರೆ ಆಯ್ಕೆದಾರರಿಗೆ ಇದ್ಯಾವುದೂ ಗಮನಕ್ಕೆ ಬರಲಿಲ್ಲವೇ. ಹೋಗಲಿ ಚಿತ್ರದಲ್ಲಿ ಡಬಲ್ ಮೀನಿಂಗ್ ಸಂಭಾಷಣೆ ಇತ್ತು. ಹಾಗಾಗಿ ಸಂಭಾಷಣೆಗೆ ಪ್ರಶಸ್ತಿ ಕೊಡೋದು ಬೇಡ. ಆದರೆ, ಬಿ.ಜೆ ಭರತ್ ಅವರ ಸಂಗೀತದ ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಎಲ್ಲರ ಸಂಗೀತದ ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಎಲ್ಲರ ಮೊಬೈಲ್ ಫೋನ್‌ನಲ್ಲೂ ಅವೇ ರಿಂಗ್‌ಟೋನ್‌ಗಳು, ಕಾಲರ್ ಟ್ಯೂನ್‌ಗಳು, ಹಲವು ಹೊಸ ಪ್ರತಿಭೆಗಳು ಹಾಡು ಬರೆದಿದ್ದರು. ಅದರಲ್ಲಿ ಸಿದ್ದು ಕೋಡಿಪುರ ಅವರಿಗೆ ಫಿಲಂಫೇರ್ ಪ್ರಶಸ್ತಿಯೂ ಸಿಕ್ಕಿತ್ತು. ಚಿತ್ರಕಥೆಯ ಬಗ್ಗೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು.
ಮನೋಹರ್ ಜೋಷಿ ಕ್ಯಾಮೆರಾದ ಬಗ್ಗೆ ಜನ ಸಾಮಾನ್ಯರೂ ಮಾತಾಡಿಕೊಂಡರು. ಜೊತೆಗೆ, ರಕ್ಷಿತ್ ನಟನೆ ಕಡಿಮೆ ಇತ್ತಾ? ಶಿವರಾಜ್ ಕುಮಾರ್ ಅವರು ನಾನು ರಕ್ಷಿತ್ ಫ್ಯಾನ್ ಆಗಿದ್ದೇನೆ ಅಂದಿದ್ರು. ನಾಯಕಿ ಶ್ವೇತಾ ಶ್ರೀವಾಸ್ತವ್ ಅವರದ್ದು ಕೂಡ ಹೊಸ ರೀತಿಯ ಅಪಿಯರೆನ್ಸ್, ಹೊಸ ರೀತಿಯ ಬಾಡಿ ಲ್ಯಾಂಗ್ವೇಜ್. ಸುನಿ ಅವರ ಕಥೆ, ನಿರ್ದೇಶನ ಇದ್ಯಾವುದೂ ಪ್ರಶಸ್ತಿಗೆ ಅರ್ಹ ಅಂತ ಕಮಿಟಿಗೆ ಅನ್ನಿಸದೇ ಇದ್ದುದು ವಿಪರ್ಯಾಸ. ಹೋಗಲಿ ಬಾನಲಿ ಬದಲಾಗೋ ಹಾಡಿನಲ್ಲಿ ಮಾಡಿದ್ದ ಸ್ಪೆಷಲ್ ಎಫೆಕ್ಟ್ ಕೂಡ ಪ್ರಶಸ್ತಿ ಕಮಿಟಿಗೆ ಸ್ಪೆಷಲ್ ಅನ್ನಿಸಲಿಲ್ಲವೇ?
ಅನಾಮಿಕರಾಗಿದ್ದ ನಮಗೆ ಈ ಚಿತ್ರ ಒಂದು ಐಡೆಂಟಿಟಿ ತಂದುಕೊಟ್ಟಿದೆ. ಹಾಗೆ ನೋಡಿದರೆ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ನಾವು ಪ್ರಶಸ್ತಿ ನಿರೀಕ್ಷಿಸಿದ್ದೇವು. ಆ ವರ್ಷ ಪೂರ್ತಿ ಜನ ಮಾತನಾಡಿದ ಚಿತ್ರ ಎಂದರೆ ಸಿಂಪಲ್ಲಾಗೊಂದ್ ಲವ್‌ಸ್ಟೋರಿ. ಅಂಥ ಚಿತ್ರಕ್ಕೆ ಕನಿಷ್ಠ ಪಕ್ಷ ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಎಂಬ ಪ್ರಶಸ್ತಿಯಾದರೂ ದಕ್ಕಬೇಡವೇ?
ನಾನು ಈ ಮೊದಲೇ ಹೇಳಿದ್ದೆ. ನಾವು ಪ್ರಾಮಾಣಿಕರು. ನಮ್ಮ ಬಹುಪರಾಕ್ ಚಿತ್ರ ಜನಕ್ಕೆ ಇಷ್ಟ ಆಗಲಿಲ್ಲಿ ಅಂದಾಗ ಅದನ್ನು ಬಲವಂತವಾಗಿ ಚಿತ್ರಮಂದಿರದಲ್ಲಿ ಓಡಿಸುವ ಪ್ರಯತ್ನವನ್ನೂ ನಾವು ಮಾಡಲಿಲ್ಲ. ಆದರೆ, ರಾಜ್ಯ ಪ್ರಶಸ್ತಿ ಪಡೆಯೋಕೆ ಏನೇನು ಅರ್ಹತೆ ಬೇಕಿತ್ತೋ ಅದೆಲ್ಲವೂ ನಮ್ಮ ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಚಿತ್ರದಲ್ಲಿ ಇತ್ತು. ಹಾಗಾಗಿ ಪ್ರಶಸ್ತಿ ಬರುತ್ತದೆ ಎಂದುಕೊಂಡಿದ್ದೆವು. ಅದನ್ನು ಬಿಟ್ಟು ಬೇರೇನನ್ನೂ ಮಾಡುವುದು ನಮಗೆ ಗೊತ್ತಿಲ್ಲ.
ಅವಾರ್ಡ್ ಬಂದಿದ್ರೆ ಅಟ್‌ಲೀಸ್ಟ್ ನಮಗೆ ಸಬ್ಸಿಡಿ ಸಿಗ್ತಿತ್ತು. 10-15 ಲಕ್ಷ ದೊಡ್ಡ ಅಮೌಂಟೇ ಸರ್ ಮನಗೆ. ಅವಾರ್ಡ್ ಬಂದಿದ್ರೆ ಸಬ್ಸಿಡಿಗಾಗಿ ಓಡಾಡೋ ಕಿರಿಕಿರಿ ಇರುತ್ತಿರಲಿಲ್ಲ. ಅದಾದರೂ ಸಹಾಯ ಆಗ್ತಿತ್ತು. ಒಂದು ಅವಾರ್ಡೂ ಕೊಡಲಾಗದ ಸಿನಿಮಾನ ನಮ್ದು?
- ಹ್ಯಾರಿ