ಕೃಷ್ಣಕುಮಾರ್ ಮತ್ತು ಹೇಮಲತಾ ದಂಪತಿ (ಸಂಗ್ರಹ ಚಿತ್ರ)
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ತಮ್ಮ ಪತ್ನಿ ಕಿರುಕುಳದಿಂದ ಬೇಸತ್ತು ಕೌಟುಂಬಿಕ ನ್ಯಾಯಾಲದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ತಮಗೆ ಹೆಂಡತಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾಳೆ. ನನಗೆ ಆಕೆಯ ಜೊತೆ ಸಂಸಾರ ನಡೆಸಲು ಸಾಧ್ಯವಾಗುತ್ತಿಲ್ಲ. ಆಕೆಯಿಂದ ನನಗೆ ವಿಚ್ಛೇದನ ನೀಡಿ ಎಂದು ತಮಿಳಿನ ಖ್ಯಾತ ನಟ ಕೆ.ಕೃಷ್ಣಕುಮಾರ್ ಅವರು ಚೈನ್ನೈನಲ್ಲಿರುವ ಕೌಟುಂಬಿಕ ನ್ಯಾಯಲಯದಲ್ಲಿ ಅರ್ಜಿ ಹಾಕಿದ್ದಾರೆ.
ಪ್ರಸ್ತುತ ಈ ಪ್ರಕರಣ ತಮಿಳುನಾಡಿನಾದ್ಯಂತ ಮಾಧ್ಯಮಗಳಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ನಟ ಕೃಷ್ಣ ಕುಮಾರ್ ತಮ್ಮ ಪತ್ನಿ ಹೇಮಲತಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. "ಪತ್ನಿ ಹೇಮಲತಾ ರಂಗನಾಥ್ ತನ್ನ ಮೇಲೆ ದೈಹಿಕ ಹಲ್ಲೆ ಮಾಡುತ್ತಿದ್ದು, ಪ್ರತಿನಿತ್ಯ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾಳೆ. ಆಕೆಯ ದುರ್ನಡತೆಯಿಂದಾಗಿ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ಆಕೆ ನೀಡುತ್ತಿರುವ ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ತಡೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮಗೆ ಕೂಡಲೇ ವಿಚ್ಛೇದನ ನೀಡಬೇಕು" ಎಂದು ನಟ ಕೃಷ್ಣಕುಮಾರ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಇದೇ ವೇಳೆ ಕೆಲ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿರುವ ಕೃಷ್ಣಕುಮಾರ್, ಪತ್ನಿ ಹೇಮಲತಾ ತಮ್ಮ ಸಿನಿಮಾ ವೃತ್ತಿಗೆ ಅಡ್ಡಿಯಾಗುತ್ತಿದ್ದು, ಇದರಿಂದ ಅನೇಕ ಸಿನಿಮಾಗಳು ಕೈತಪ್ಪಿ ಹೋದವು. ಚಿತ್ರರಂಗದಲ್ಲಿ ನನಗೆ ಸಾಕಷ್ಟು ಕೆಟ್ಟ ಹೆಸರು ಬರುವಂತಾಯಿತು ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ "ತಾವು ಫೆಬ್ರವರಿ 6, 2014ರಲ್ಲಿ ನಾನು ಹೇಮಲತಾ ಅವರನ್ನು ಮದುವೆಯಾಗಿದ್ದೆ. ಆದರೆ ನನ್ನ ತುಂಬಿದ ಕುಟುಂಬ ಆಕೆಗೆ ಇಷ್ಟವಾಗಲಿಲ್ಲ. ಆಗ ಬೇರೆ ಮನೆ ಮಾಡಲು ಸಾಕಷ್ಟು ಒತ್ತಡ ಹೇರಿದರು. ಹೀಗಾಗಿ ನಾನು ಆಕೆಗಾಗಿ ಬೇರೆ ಮನೆ ಮಾಡಿದೆ. ಆದರೆ ಅಲ್ಲೂ ನನಗೆ ಹಿಂಸೆ ನೀಡಲು ಆರಂಭಿಸಿದಳು. ಇಷ್ಟೇ ಅಲ್ಲದೇ ಹೇಮಲತಾ ಏನೇನೋ ಬೇಡಿಕೆ ಇಡುತ್ತಿದ್ದಳು. ಅದನ್ನು ನನ್ನ ಕೈಯಿಂದ ಪೂರೈಸಲು ಆಗುತ್ತಿರಲಿಲ್ಲ. ಮನೆಯಲ್ಲಿ ಮಾಲೀಕಳಂತೆ ಆದೇಶ ಮಾಡುತ್ತಿದ್ದಳು. ಆಕೆಯ ಹಿಂಸೆಯಿಂದ ನಾನು ತತ್ತರಿಸಿ ಹೋಗಿದ್ದೇನೆ" ಎಂದು ಕೃಷ್ಣಕುಮಾರ್ ದೂರಿದ್ದಾರೆ.
ಪತಿ ಆರೋಪದಲ್ಲಿ ಹುರುಳಿಲ್ಲ:ಕೃಷ್ಣ ಕುಮಾರ್ ಪತ್ನಿ ಹೇಮಲತಾ ಪ್ರತ್ಯಾರೋಪ
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೃಷ್ಣ ಕುಮಾರ್ ಪತ್ನಿ ಹೇಮಲತಾ ರಂಗನಾಥ್ ಅವರು, ತಮ್ಮ ವಿರುದ್ಧ ಪತಿ ಕೃಷ್ಣಕುಮಾರ್ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅವರ ಆರೋಪಗಳೆಲ್ಲವೂ ಸುಳ್ಳು. ಕೃಷ್ಣಕುಮಾರ್ ಹೆಚ್ಚಾಗಿ ಮದ್ಯಪಾನ ಮಾಡುತ್ತಾರೆ, ಮನೆಗೆ ಬಂದರೆ ರಾಕ್ಷಸನಂತೆ ವರ್ತಿಸುತ್ತಾರೆ. ಹಲವು ಬಾರಿ ವರದಕ್ಷಿಣೆಗಾಗಿ ತಮಗೆ ದೈಹಿಕ ಕಿರುಕುಳ ನೀಡಿದ್ದಾರೆ. ಇದಲ್ಲದೇ ಅವರಿಗೆ ಬೇರೆ ಮಹಿಳೆಯ ಜೊತೆ ಅನೈತಿಕ ಸಂಬಂಧವಿದೆ ಎನ್ನುವ ಶಂಕೆ ತಮಗಿದೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಎಂದು ನಿರ್ಮಾಪಕರ ಸಮಿತಿಗೆ ದೂರು ನೀಡಿದ್ದೇನೆ ಎಂದು ಅವರು ಆರೋಪಿಸಿದ್ದಾರೆ.
ಪ್ರಸ್ತುತ ಇಬ್ಬರೂ ಪರಸ್ಪರರ ಮೇಲೆ ದೂರು ದಾಖಲಿಸಿದ್ದು, ಕೊಯಮತ್ತೂರಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆ ನಟ ಕೃಷ್ಣ ಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.