ಬಹುಭಾಷೆಯಲ್ಲಿ ತೆರೆಕಂಡ ಐತಿಹಾಸಿಕ ಚಿತ್ರ ಬಾಹುಬಲಿಯಲ್ಲಿ ವಿಲನ್ ಕಥಾಪಾತ್ರದ ಹೆಸರು ಕಾಲಕೇಯ. ಈತ ಮಾತನಾಡುವ ಭಾಷೆ ಕಿಲಿಕಿಲಿ. ಸಿನಿಮಾದಲ್ಲಿ ಈ ಭಾಷೆ ಮಾತನಾಡುವಾಗ ಸಬ್ ಟೈಟಲ್ ಬಳಸದೇ ಇರುವ ಕಾರಣ ಇದು ಬಾಹುಬಲಿ ಸಿನಿಮಾಗಾಗಿಯೇ ನಿರ್ದೇಶಕರು ಹೊಸತೊಂದು ಸ್ಪೆಷಲ್ ಭಾಷೆಯನ್ನು ತಯಾರಿಸಿದ್ದಾರೆ ಎಂದೇ ನೋಡಿದಾಗ ಅನಿಸುತ್ತದೆ.
ಆದರೆ ಇದು ಹಾಗಲ್ಲ. ಇದೂ ಕೂಡಾ ಒಂದು ಭಾಷೆಯೇ. ಕೇವಲ 750 ಪದಗಳಿರುವ ಈ ಭಾಷೆಯಲ್ಲಿ 40 ವ್ಯಾಕರಣ ನಿಯಮಗಳಿವೆ. ಅಂದ ಹಾಗೆ ಈ ಕಿಲಿಕಿಲಿ ಎಂದು ಕರೆಯಲ್ಪಡುವ ಈ ವಿಶೇಷ ಭಾಷೆಯನ್ನು ಸೃಷ್ಟಿಸಿದ್ದು ಗೀತರಚನೆಕಾರ ಮದನ್ ಕಾರ್ಕಿ
ಕಿಲಿಕಿಲಿ ಭಾಷೆಯ ಬಗ್ಗೆ ಮದನ್ ಹೇಳುವುದು ಹೀಗೆ
ಒಂದ್ಸಾರಿ ಆಸ್ಟ್ರೇಲಿಯಾಗೆ ಹೋದಾಗ ಅಲ್ಲಿರುವ ಇಬ್ಬರು ಮಕ್ಕಳಿಗೆ ತಮಿಳು ಭಾಷೆಯನ್ನು ಕಲಿಸುವ ಸಲುವಾಗಿ ಬೇರೊಂದು ಭಾಷೆಯೊಂದನ್ನು ಸೃಷ್ಟಿಸಿದೆ. ಅದು ಮಕ್ಕಳನ್ನು ಖುಷಿ ಪಡಿಸುವುದಕ್ಕೋಸ್ಕರ ಮಾತ್ರ ಆಗಿತ್ತು. ಹಾಗೆ ಹೊಸ ಪದಗಳನ್ನು ರಚಿಸಿ ಆ ಭಾಷೆಗೆ ಕ್ಲಿಕ್ ಎಂದು ಹೆಸರಿಟ್ಟೆ. ಮಿನ್ ಎಂಬ ಪದದ ಅರ್ಥ ನಾನು ಎಂಬುದಾಗಿಯೂ ನೀಂ ಎಂಬ ಪದಕ್ಕೆ ನೀನು ಎಂಬ ಅರ್ಥವನ್ನೂ ಕೊಟ್ಟೆ.
ಬಾಹುಬಲಿ ಚಿತ್ರದಲ್ಲಿ ಕಾಲಕೇಯ ಗೋತ್ರದ ಜನರಿಗಾಗಿ ಪರಿಷ್ಕೃತವಾಗಿರದ ಭಾಷೆಯೊಂದನ್ನು ಸೃಷ್ಟಿಸಬೇಕೆಂದು ನಿರ್ದೇಶಕ ರಾಜಮೌಳಿ ಹೇಳಿದಾಗ ನನ್ನ ಮನಸ್ಸಲ್ಲಿ ಕ್ಲಿಕ್ ಭಾಷೆಯೇ ಬಂದಿತ್ತು. ಆಮೇಲೆ ಅದನ್ನು ಒಂದಷ್ಟು ಬದಲಾವಣೆಗೊಳಪಡಿಸಿ ಬಾಹುಬಲಿ ಸಿನಿಮಾದಲ್ಲಿ ಬಳಸಿದೆವು.
ವಿಶೇಷವೇನೆಂದರೆ ಜಗತ್ತಿನಲ್ಲಿ ಮೊದಲು ಮಾತನಾಡಿದ ಭಾಷೆಯ ಹೆಸರು ಕ್ಲಿಕ್ ಎಂದಾಗಿತ್ತು . ಈ ಭಾಷೆಯನ್ನು ಆಫ್ರಿಕಾದಲ್ಲಿನ ಬುಡಕಟ್ಟು ಜನರು ಮಾತಾಡುತ್ತಿದ್ದರು ಎಂದು ನಾನು ಲೇಖನವೊಂದರಲ್ಲಿ ಓದಿದ್ದೆ. ಆದರೆ ಆ ಭಾಷೆ ಈಗ ಉಳಿದಿಲ್ಲ.
ಬಾಹುಬಲಿ ಚಿತ್ರದಲ್ಲಿ ಕುತೂಹಲ ಹುಟ್ಟಿಸಿದ್ದ ಕಿಲಿಕಿಲಿ ಭಾಷೆಯ ಮೂಲಕ ಇದೀಗ ಕಾರ್ಕಿ ಕ್ಲಿಕ್ ಆಗಿದ್ದಾರೆ.