ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಐರಾವಾತ' ಸಿನೆಮಾದ ಪರಿಚಯಾತ್ಮಕ ಹಾಡಿನ ಚಿತ್ರೀಕರಣ ೧೦೦ ಜನ ಹಿನ್ನಲೆ ನೃತ್ಯಕಾರರೊಂದಿಗೆ ಇತ್ತೀಚೆಗಷ್ಟೇ ಮುಗಿದಿದೆ. ಜುಲೈ ೧೭ರಂದು ನಿರ್ದೇಶಕ ಎ ಪಿ ಅರ್ಜುನ್ ಅವರ ಅನುಪಸ್ಥಿತಿಯಲ್ಲೇ ಸ್ವಿಟ್ಸರ್ಲ್ಯಾಂಡ್ ಗೆ ತೆರಳಿ ಚಿತ್ರೀಕರಣ ಮುಗಿಸಿದ್ದಾರೆ. ನಟ ದರ್ಶನ, ನಾಯಕ ನಟಿ ಊರ್ವಶಿ ರೌಟೇಲ ಹಾಗೂ ನೃತ್ಯ ನಿರ್ದೇಶಕ ಕಲಿ ಮಾಸ್ತರ್ ಮತ್ತಿತರ ಸಹ ನಿರ್ದೇಶಕರೊಂದಿಗೆ ಹಿಮ ಪರ್ವತ ನಾಡಿನಲ್ಲಿ ಉಳಿದೆರಡು ಹಾಡುಗಳ ಚಿತ್ರೀಕರಣ ಮುಗಿಸಲಿದ್ದಾರಂತೆ.
ಎ ಪಿ ಅರ್ಜುನ್ ಮತ್ತು ನಟ ದರ್ಶನ್ ಅವರ ನಡುವಿನ ಭಿನಾಭಿಪ್ರಾಯ ತೀವ್ರ ಮಾತಿನ ಚಕಮಕಿಗೆ ಎಡೆಮಾಡಿಕೊಟ್ಟಿತ್ತು. ಇದು ಎ ಪಿ ಅರ್ಜುನ್ ಅವರನ್ನು ದೂರ ಇಡುವ ಮಟ್ಟಕ್ಕೆ ಬೆಳೆದಿದೆ ಎಂದು ತಿಳಿದುಬಂದಿದೆ.
ಆದರೆ ಇದಕ್ಕೆ ಸ್ಪಷ್ಟೀಕರಣ ನೀಡಿರುವ ನಿರ್ದೇಶಕ ತುರ್ತು ಕೆಲಸದಿಂದ ಚಿತ್ರೀಕರಣದಿಂದ ದೂರ ಉಳಿಯಬೇಕಾಗಿ ಬಂತು ಎಂದಿದ್ದಾರೆ. "ಚಿತ್ರೀಕರಣದ ನಂತರದ ಕೆಲಸಗಳು ಬೇಕಾದಷ್ಟಿದ್ದವು ಆದುದರಿಂದ ನಾನು ಇಲ್ಲೇ ಉಳಿದೆ ಎಂದಿದ್ದಾರೆ. ಎಡಿಟಿಂಗ್ ನಲ್ಲಿ ನಾನು ನಿರತನಾಗಿದ್ದೇನೆ" ಎನ್ನುತ್ತಾರೆ ಅರ್ಜುನ್.
ಸಂದೇಶ್ ನಾಗರಾಜ್ ಈ ಸಿನೆಮಾದ ನಿರ್ಮಾಪಕ.