ವಿವಾದಗಳು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಹೊಸತೇನಲ್ಲ. ಮುಂಬೈನಲ್ಲಿ ಭಯೋತ್ಪಾದಕ ಧಾಳಿ ನಡೆದ ಕೆಲವೇ ಘಂಟೆಗಳಲ್ಲಿ, ಅಂದಿನ ಮುಖ್ಯಮಂತ್ರಿಯವರ ಪುತ್ರನ ಜೊತೆ ದಾಳಿಗೊಳಗಾದ ಹೋಟೆಲ್ ಆವರಣಕ್ಕೆ ಹೊಕ್ಕಿ ವಿವಾದಕ್ಕೀಡಾಗಿದ್ದರು.
ಈಗ ಸೃಷ್ಟಿಸಿಕೊಂಡಿರುವ ಹೊಸ ವಿವಾದದಲ್ಲಿ, ಗೋದಾವರಿ ಪುಷ್ಕರಂ ಸ್ನಾನದ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ ೨೭ ಮಂದಿ ಮೃತಪಟ್ಟ ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ "ಈ ಬಡ ಭಕ್ತಾದಿಗಳನ್ನು ಸಾಯದಂತೆ ದೇವರು ಏಕೆ ನಿಲ್ಲಿಸಲಿಲ್ಲ. ಇವರು ಬದುಕುಳಿದವರಿಗಿಂತಲೂ ಕಡಿಮೆ ಪ್ರಾರ್ಥನೆ ಮಾಡಿದ್ದರು ಎಂತಲೇ?" ಎಂದು ಬರೆದಿದ್ದಾರೆ.
ಇನ್ನು ಒಂದು ಕೈ ಮುಂದೆ ಹೋಗಿ, ದೇವರೇ ತನ್ನ ಭಕ್ತಾದಿಗಳನ್ನು ಉಳಿಸಿಕೊಳ್ಳದೆ ಹೋದಾಗ ಆಂಧ್ರಪ್ರದೇಶದ ಬಡ ಸಿಎಂ ಎನ್ ಚಂದ್ರಬಾಬು ನಾಯ್ಡು ಕೂಡ ಹೆಚ್ಚೇನು ಮಾಡಲಾಗಿಲ್ಲ ಎಂದು ಕೂಡ ಬರೆದಿದ್ದಾರೆ.
೧೪೪ ವರ್ಷಕ್ಕೊಮ್ಮೆ ನಡೆಯುವ ಈ ಮಹಾಪುಶ್ಕರಂ ನಲ್ಲಿ ಭಾಗಿಯಾಗಲು ಗೋದಾವರಿ ನದಿಯ ದಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗಿಯಾಗಿದ್ದರು. ಇಂತಹ ಸಮಯದಲ್ಲಿ ನಡೆದ ಕಾಲ್ತುಳಿತದ ಅವಘಡದಿಂದ ೨೭ ಜನ ಮೃತಪಟ್ಟಿದ್ದರು. ಮೃತಪಟ್ಟ ಕುಟುಂಬದವರಿಗೆ ಮುಖ್ಯಮಂತ್ರಿ ನಾಯ್ಡು ೧೦ ಲಕ್ಷ ಧನಸಹಾಯವನ್ನು ಘೋಷಿಸಿದ್ದಾರೆ.