ಇದೊಂದು ಸುದ್ದಿ ಕಳೆದ ಎರಡು ದಿನಗಳಿಂದ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಹಾಗಂತ ಇದು ಕೇವಲ ಸದ್ದು ಮಾಡುತ್ತಿರುವ ಸುದ್ದಿಯ ಸಾಲು ಅಲ್ಲ. ಮುತ್ತಪ್ಪ ರೈ ಅವರನ್ನು ಸ್ವತಃ ರಾಮ್ ಗೋಪಾಲ್ ವರ್ಮಾ ಅವರೇ ಭೇಟಿ ಮಾಡಿರುವ ಸುದ್ದಿ ಈಗ ಗುಟ್ಟಾಗಿ ಉಳಿದಿಲ್ಲ.
ಹಾಗಿದ್ದರೆ ರೈ ಜತೆಗೆ ಆರ್‍ಜಿವಿಗೆ ಏನು ಕೆಲಸ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಸದ್ಯ ನಟ ಶಿವರಾಜ್ ಕುಮಾರ್ ಅಭಿನಯದ `ಕಿಲ್ಲಿಂಗ್ ವೀರಪ್ಪನ್' ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿರುವ ವರ್ಮಾ, ಮುಂದಿನ ಚಿತ್ರದ ನಿರ್ದೇಶನಕ್ಕೆ ಯೋಜನೆ ರೂಪಿಸುತ್ತಿದ್ದಾರೆ. ಅದರ ಭಾಗವಾಗಿಯೇ ಮುತ್ತಪ್ಪ ರೈ ಅವರನ್ನು ಭೇಟಿ ಮಾಡಿದ್ದಾರೆಂಬ ಗುಸುಗುಸು ಕೇಳಿಬರುತ್ತಿದೆ. ಸದ್ಯ ಬೆಂಗಳೂರಿನಲ್ಲಿರುವ ರೈ ಅವರ ಖಾಸಗಿ ಮನೆಯಲ್ಲಿ ಇಬ್ಬರು ಭೇಟಿಯಾಗಿದ್ದು, ಮುಂದಿನ ದಿನಗಳಲ್ಲಿ ಆರ್‍ಜಿವಿ ಕನ್ನಡ ಭೂಗತ ಜಗತ್ತಿನ ಕತೆಗಳನ್ನು ಸಿನಿಮಾ ಮಾಡುತ್ತಾರೆಂಬ ಸುದ್ದಿ ಇದೆ.
ಅದರಲ್ಲೂ `ಕಿಲ್ಲಿಂಗ್ ವೀರಪ್ಪನ್' ಚಿತ್ರ ತೆರೆಗೆ ಬಂದ ನಂತರ ಮತ್ತೊಮ್ಮೆ ಕನ್ನಡದಲ್ಲೇ ಸಿನಿಮಾ ಮಾಡುವ ಯೋಜನೆ ಹಾಕಿಕೊಂಡಿರುವ ವರ್ಮಾ ಗ್ಯಾಂಗ್, ಈ ನಿಟ್ಟಿನಲ್ಲಿ ಕರ್ನಾಟಕದ ಭೂಗತ ವ್ಯಕ್ತಿಗಳ ಬೆನ್ನು ಬಿದ್ದಿದೆ ಎನ್ನಲಾಗುತ್ತಿದೆ. ಅಲ್ಲದೆ ಮತ್ತೊಂದು ಮಾಹಿತಿಯ ಪ್ರಕಾರ ಕನ್ನಡದಲ್ಲಿ ವರ್ಮಾ ಮಾಡಲಿರುವ ಮುಂದಿನ ಚಿತ್ರಕ್ಕೆ ಮುತ್ತಪ್ಪ ರೈ ಹಣ ಹಾಕಲಿದ್ದಾರೆಂಬ ಸುದ್ದಿಯೂ ಇದೆ. ಹೀಗಾಗಿ ರೈ ಹೇಳುವ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ವರ್ಮಾ ಸಿನಿಮಾ ಮಾಡುವ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಈಗಾಗಲೇ ಮುತ್ತಪ್ಪ ರೈ ಪುತ್ರ ತಮಿಳು ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ರೈ ಅವರೇ. ಜತೆಗೆ ಮೊದಲಿನಿಂದಲೂ ಚಿತ್ರರಂಗದ ಜತೆಗೆ ನಂಟು ಇಟ್ಟುಕೊಂಡಿರುವ ರೈ, ಕನ್ನಡ ಚಿತ್ರರಂಗದಲ್ಲಿ ತಮ್ಮ ಪುತ್ರನನ್ನು ಪರಿಚಯಿಸಬೇಕೆಂಬ ಆಸೆ ಅವರದ್ದು.
ಇತ್ತೀಚೆಗೆ ಸಿನಿಮಾಗಳ ಆಡಿಯೋ ಬಿಡುಗಡೆ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟಿ ಅನುಷ್ಕಾ ಶೆಟ್ಟಿ ಅವರ ಅಣ್ಣ ಗುಣರಂಜನ್ ಶೆಟ್ಟಿ, ರೈ ಅವರಿಗೆ ತುಂಬಾ ಆಪ್ತರು. ಈ ಎಲ್ಲ ಕಾರಣಗಳಿಗಾಗಿ ಮುತ್ತಪ್ಪ ರೈಗೆ ಚಿತ್ರರಂಗದ ಜತೆಗೆ ಹತ್ತಿರದ ನಂಟು ಇದೆ. ಈಗ ಆರ್‍ಜಿವಿ ಅವರನ್ನು ಭೇಟಿ ಮಾಡಿರುವುದು ನೋಡಿದರೆ ವರ್ಮಾ ಜತೆ ಸಿನಿಮಾ ಮಾಡುವುದು ಕಾಯಂ ಎನ್ನುವ ಸುದ್ದಿ ಇದೆ. ಮಂಗಳವಾರ (ಜು.28) ಕೂಡ ಮುತ್ತಪ್ಪ ರೈ ಮನೆಯಲ್ಲಿ ವರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಆರ್‍ಜಿವಿ ಆಂಡ್ ಟೀಮ್ ಮುಂದೆ ಕನ್ನಡದಲ್ಲೇ ಸಿನಿಮಾ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ. ಈ ನಡುವೆ ಈಗಾಗಲೇ ಕನ್ನಡದಲ್ಲಿ ಬಂದಿರುವ ಭೂಗತ ಜಗತ್ತಿನ ಸಿನಿಮಾವೊಂದನ್ನು ತೆಲುಗು ಭಾಷೆಗೆ ವರ್ಮಾ ಸಾರಥ್ಯದಲ್ಲಿ ರಿಮೇಕ್ ಮಾಡುವ ಸಾಧ್ಯತೆಗಳು ಇವೆ. ಜತೆಗೆ ಅದೇ ಚಿತ್ರದ ನಿರ್ದೇಶಕರ ಚಿತ್ರವನ್ನು ನಿರ್ಮಾಣ ಮಾಡುತ್ತಾರೆಂಬುದು ಸದ್ಯ ವರ್ಮಾರ ಆಪ್ತರ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿ. ಅಂತೂ ವರ್ಮಾ, ಮುತ್ತಪ್ಪ ರೈ ಅಡ್ಡಕ್ಕೆ ಕಾಲಿಟ್ಟಿದ್ದಾರೆ.