ನವದೆಹಲಿ: ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್ ಟಿ ಐ ಐ) ವಿದ್ಯಾರ್ಥಿಗಳು ನಟ ಗಜೇಂದ್ರ ಚೌಹಾನ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿರುವ ನಡೆಯನ್ನು ವಿರೋಧಿಸಿ ಅನಿರ್ಧಿಷ್ಟ ಕಾಲದವರೆಗೆ ಪ್ರತಿಭಟನೆ ಮಾಡುವ ವರದಿ ಬಿತ್ತರವಾಗುತ್ತಿದ್ದಂತೆ ನನ್ನ ಬಗ್ಗೆ ತೀರ್ಪು ನೀಡುವುದಕ್ಕೂ ಮುಂಚೆ ನನಗೆ ಅವಕಾಶ ನೀಡಿ ಎಂದು ಬಿಜೆಪಿ ಸದಸ್ಯ, ನಟ ಗಜೇಂದ್ರ ಚೌಹಾನ್ ತಿಳಿಸಿದ್ದಾರೆ.
ಯಾವುದೇ ತೀರ್ಮಾನಕ್ಕೆ ಬರುವುದಕ್ಕೆ ಮುಂಚಿತವಾಗಿ ನನ್ನ ಜೊತೆ ಕೂತು ಚರ್ಚಿಸಿ ಎಂದು ವಿದ್ಯಾರ್ಥಿ ಸಂಘಟನೆಗೆ ಕರೆ ಕೊಟ್ಟಿದ್ದಾರೆ.
"ನನ್ನ ಹಿನ್ನಲೆ ತಿಳಿಯದೆ, ನನ್ನ ಬಗ್ಗೆ ತಿಳಿಯದೆ, ನನ್ನ ಸಾಮರ್ಥ್ಯವನ್ನು ತಿಳಿಯದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
"ನನ್ನ ಎದುರು ಕೂತು ಮಾತನಾಡಿ. ಆಗಲೂ ಕೂಡ ನಿಮಗೆ ಬೇಡವೆನ್ನಿಸಿದರೆ ಬೇರೆ ಆಯ್ಕೆ ಬಗ್ಗೆ ಚಿಂತಿಸಬಹುದು. ನನ್ನ ಹೆಸರನ್ನು ಸೂಚಿಸಲು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ತನ್ನದೇ ಆದ ಸಮಯವನ್ನು ತೆಗೆದುಕೊಂಡಿದೆ. ನನ್ನ ಹಿನ್ನಲೆ ಮತ್ತು ಸಾಮರ್ಥ್ಯದ ಬಗ್ಗೆ ಅವರು ಪರೀಕ್ಷೆ ನಡೆಸಿರುತ್ತಾರೆ. ನಾನು ಪಕ್ಷದ ಜೊತೆಯಲ್ಲಿದ್ದೇನೆ ಎನ್ನುವುದಷ್ಟೇ ಅಲ್ಲ, ಬೇರೆಯ ಸಂಗತಿಗಳೂ ಇವೆ" ಎಂದು ಚೌಹಾನ್ ಟೈಮ್ಸ್ ನೌಗೆ ತಿಳಿಸಿದ್ದಾರೆ.
ಬಿ ಆರ್ ಚೋಪ್ರಾ ಅವರ ಮಹಾಭಾರತ ಧಾರಾವಾಹಿಯಲ್ಲಿ 'ಯುಧಿಷ್ಠಿರ' ಪಾತ್ರದಲ್ಲಿ ಚೌಹಾನ್ ಪ್ರಖ್ಯಾತರಾಗಿದ್ದರು. 'ಭಾಗಬನ್', 'ತುಮಕೋ ನ ಭೂಲ್ ಪಾಯೆಂಗೆ' ಇತ್ಯಾದಿ ಚಲನಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕೂಡ ನಟಿಸಿದ್ದಾರೆ.
ತಮ್ಮ ಕೆಲಸ ಮತ್ತು ಸಾಮರ್ಥ್ಯದಿಂದ ಸಂಸ್ಥೆಗೆ ನ್ಯಾಯ ಒದಗಿಸಬಲ್ಲ ಮತ್ತೊಬ್ಬ ಅಧ್ಯಕ್ಷನನ್ನು ಕೂಡಲೆ ನೇಮಿಸುವಂತೆ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ.