ಬೆಂಗಳೂರು: ವಿತರಕರಿಲ್ಲದೆ ನೆನೆಗುದಿಗೆ ಬಿದ್ದಿದ್ದ 'ಗೀತ ಬ್ಯಾಂಗಲ್ ಸ್ಟೋರ್ಸ್' ಸಿನೆಮಾಗೆ ಮುಕ್ತಿ ನೀಡಿದ್ದಾರೆ ನಿರ್ದೇಶಕ-ನಟ-ವಿತರಕ ಯೋಗರಾಜ್ ಭಟ್. 'ಯೋಗರಾಜ್ ಫಿಲಂಸ್' ಮೂಲಕ ಮಂಜು ಮಿತ್ರ ನಿರ್ದೇಶನದ ಚೊಚ್ಚಲ ಚಲನಚಿತ್ರ ಜುಲೈ ನಲ್ಲಿ ತೆರೆ ಕಾಣಲಿದೆ.
೧೦ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ನಟ ಪಂಜು ಸಿನೆಮಾ ಬಿಡುಗಡೆ ಕಾಣುತ್ತಿರುವುದಕ್ಕೆ ಉತ್ಸುಕರಾಗಿದ್ದಾರೆ. ತಮಗೆ ಪಾತ್ರ ದೊರಕಿಸಿಕೊಡಲು ನೆರವಾದ ನಟ ಲೂಸ್ ಮಾದ ಅಲಿಯಾಸ್ ಯೋಗಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇದು ಗ್ರಾಮೀಣ ಹಿನ್ನಲೆಯ ಚಿತ್ರ. ಜೀವನಕ್ಕಾಗಿ ರೇಶ್ಮೆ ಹುಳು ಸಾಕಾಣೆ ಮಾಡುವ ಯುವಕ ಮತ್ತು ಅವನ ಕುಟುಂಬದ ಸುತ್ತ ಕಥೆ ಸುತ್ತುತ್ತದೆ ಎನ್ನುತ್ತಾರೆ ಪಂಜು.
"ಹೆಸರಿನಿಂದ ಇದು ನಟಿ ಕೇಂದ್ರಿತ ಸಿನೆಮಾ ಎಂದು ತಪ್ಪು ತಿಳಿಯಬಹುದು. ಆದರೆ ಬಳೆ ಅಂಗಡಿಹಾಕಿಕೊಡುವ ಯುವಕನೇ ಸಿನೆಮಾದ ಹೀರೋ. 'ಗೀತಾ ಬ್ಯಾಂಗಲ್ ಸ್ಟೋರ್ಸ್' ಅಂಗಡಿ ಪ್ರಾಂಭಿಸಲು ಅವನು ಪಡುವ ಕಷ್ಟ ಕೋಟಲೆಗಳೇ ಸಿನೆಮಾದ ಹೂರಣ" ಎನ್ನುತ್ತಾರೆ ನಟ.
ಮಂಡ್ಯ ಮೂಲದ ಪಂಜು ತಮ್ಮ ಪದವಿ ಶಿಕ್ಷಣ ಪೂರ್ಣಗೊಳಿಸಲು ಬೆಂಗಳೂರಿಗೆ ಬಂದರಂತೆ. "ನನ್ನ ನಟನಾ ಆಸಕ್ತಿ ನನ್ನನ್ನು ಬೆನಕ ರಂಗ ಸಂಸ್ಥೆಯತ್ತ ಕರೆದೊಯ್ಯಿತು. ಅಲ್ಲಿಂದ ಧಾರಾವಾಹಿಗಳಿಗೆ ಜಿಗಿದೆ. ಮಿಲನ ಪ್ರಕಾಶ್ ಅವರ 'ಲಕುಮಿ'ಯಲ್ಲಿ ನನಗೆ ಮೊದಲ ಅವಕಾಶ ಸಿಕ್ಕಿದ್ದು. ಧಾರಾವಾಹಿಯಲ್ಲಿ ಹಳ್ಳಿ ಹುಡುಗನ ಪಾತ್ರವನ್ನು ಮೆಚ್ಚಿ ನಿರ್ದೇಶಕರ ಸಹೋದರ ನನ್ನ ಹೆಸರನ್ನು ಮಂಜು ಮಿತ್ರ ಅವರಲ್ಲಿ ಹೇಳಿದರು. ಅವರು ನನಗೆ ಪಾತ್ರ ನೀಡಿದರು, ನಂತರ ಸ್ಕ್ರಿಪ್ಟ್ ಓದಿದ ಮೇಲೆ ಆ ಪಾತ್ರ ನನಗೆ ಏಕೆ ನೀಡಿದರು ಎಂದು ಅರ್ಥವಾಯಿತು" ಎನ್ನುತ್ತಾರೆ ಪಂಜು.
ಚಲನಚಿತ್ರದಲ್ಲಿ ಅಚ್ಯುತ್ ರಾವ್, ಭವ್ಯ ಮತ್ತು ವಿನಯ್ ಪ್ರಸಾದ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ ಮೈತ್ರಿ ಸಿನೆಮಾದ ನಿರ್ದೇಶಕ ಬಿ ಎಂ ಗಿರಿರಾಜ್ ಖಳನಾಯಕನ ಪಾತ್ರ ಮಾಡಿದ್ದಾರೆ.