ಆ ದಿನಗಳು, ಸ್ಲಂಬಾಲಾ ಮತ್ತು ಎದೆಗಾರಿಕೆ ನಂತರ ಮತ್ತೊಂದು ಭೂಗತಲೋಕದ ಕತೆ ಹೊತ್ತು ಬಂದಿದ್ದಾರೆ ಅಗ್ನಿ ಶ್ರೀಧರ್. ಚಿತ್ರದ ಹೆಸರು ಸೈಲೆಂಟ್ ಸುನೀಲ. ಚಿತ್ರದ ನಾಯಕ ಕೂಡ ಸೈಲೆಂಟ್ ಸುನೀಲ. ಹೌದು ಭೂಗತಲೋಕದಲ್ಲಿ ಕುಖ್ಯಾತಿ ಗಳಿಸಿದ್ದ ಸುನೀಲ ಈ ಚಿತ್ರದ ನಾಯಕನಾಗುವ ಮೂಲಕ ನಟನಾಗುತ್ತಿದ್ದಾರೆ.
ಬೆಂಗಳೂರು ಭೂಗತಲೋಕವನ್ನು ಹತ್ತಿರದಿಂದ ಬಲ್ಲ ಅಗ್ನಿ ಶ್ರೀಧರ್ ಸುನೀಲï ಕಥೆಯನ್ನು ಅವರಿಂದಲೇ ಕೇಳಿ ಇದನ್ನು ಸಿನಿಮಾ ಮಾಡಲೇಬೇಕೆಂದು ನಿರ್ಧರಿಸಿದ್ದಾರೆ. ಶ್ರೀಧರ್ ತಾವು ಬರೆದ ಕಥೆಗೆ ಸುಮನ್ ಕಿತ್ತೂರು ಮತ್ತು ದುನಿಯಾ ಸೂರಿಯೊಂದಿಗೆ ಕೂತು ಚಿತ್ರಕಥೆ ಮಾಡಿ ಸಂಭಾಷಣೆಯನ್ನೂ ಬರೆದಿದ್ದಾರೆ. ತಮಸ್ಸು ನಂತರ ನಿರ್ದೇಶನದಿಂದ ದೂರ ಉಳಿದಿರುವ ಶ್ರೀಧರ್, ತಮ್ಮದೇ ತಂಡದ ನಿರ್ದೇಶಕಿ ಸುಮನ್ ಕಿತ್ತೂರು ಕೂಡ ಕಿರಗೂರಿನ ಗಯ್ಯಾಳಿಗಳು ಚಿತ್ರದ ನಿರ್ದೇಶನದಲ್ಲಿ ಬ್ಯುಸಿ ಇರುವ ಕಾರಣ ನಿರ್ದೇಶನದ ಜವಾಬ್ದಾರಿಯನ್ನು ದುನಿಯಾ ಸೂರಿಗೆ ವಹಿಸಿದ್ದಾರೆರೆ.
ಬಹುದಿನಗಳಿಂದ ಅಗ್ನಿ ಶ್ರೀಧರ್‍ರ ಕಥೆಗಳನ್ನು ಸಿನಿಮಾ ಮಾಡಬೇಕೆಂಬ ಆಸೆ ಹೊತ್ತಿದ್ದ ಸೂರಿಗೆ ಈ ಚಿತ್ರದ ಮೂಲಕ ಆಸೆ ಈಡೇರಿದೆ. ಚಿತ್ರಕ್ಕೆ ನಾಯಕ ಯಾರು ಎಂಬ ಪ್ರಶ್ನೆ ಬಂದಾಗ ಸೂರಿ ರಿಯಲ್ ಸುನೀಲನನ್ನೇ ನಾಯಕನನ್ನಾಗಿಸೋಣ ಎಂದಿದ್ದಾರೆ. ಒತ್ತಾಯದ ಮೇರೆಗೆ ಸುನೀಲ ನಾಯಕರಾಗಿದ್ದಾರೆ. ಚಿತ್ರದಲ್ಲಿ ಸುನೀಲ ಹೇಳಿದ ಘಟನೆಗಳು, ತಾವು ಗಮನಿಸಿದ ಘಟನೆಗಳನ್ನು ತುಸು ವರ್ಣರಂಜಿತವಾಗಿ ಹೇಳಲಾಗುತ್ತದೆ ಎನ್ನುತ್ತಾರೆ ಶ್ರೀಧರ್. ಚಿತ್ರದ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ ಎನ್ನುವ ಸೂರಿ, ಚಿತ್ರದಲ್ಲಿ ನಾಯಕಿ ಇರುತ್ತಾರೋ ಇಲ್ಲವೋ ಎಂಬ ಬಗ್ಗೆಯೂ ಸಸ್ಪೆನ್ಸ್ ಇಟ್ಟಿದ್ದಾರೆ.
ಸೂರಿಯ ಫೇವರಿಟ್ ಛಾಯಾಗ್ರಾಹಕ ಸತ್ಯ ಹೆಗಡೆ ಕ್ಯಾಮೆರಾ ಅಂಡರ್‍ವಲ್ರ್ಡ್ ನಲ್ಲಿ ಪಯಣಿಸಲಿದ್ದು, ಹರಿಕೃಷ್ಣ ಚಿತ್ರದ ಮೊದಲ ಲುಕ್ಕಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಗಳಲ್ಲಿ ಹಾಡುಗಳಿರುತ್ತವೋ ಇಲ್ಲವೋ, ಸಂಗೀತ ನಿರ್ದೇಶಕರು ಯಾರು ಎಂಬ ಪ್ರಶ್ನೆಗೂ ಮುಂದಿನ ದಿನಗಳಲ್ಲಿ ಉತ್ತರ ದೊರಕಲಿದೆ. ಮೇಘ ಮೂವೀಸ್ ಲಾಂಛನದಲ್ಲಿ ಚಿತ್ರ ತಯಾರಾಗುತ್ತಿದ್ದು, ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಸೂರಿ ಈಗಾಗಲೇ ಕೆಂಡಸಂಪಿಗೆ ಸಿನಿಮಾ ಮುಗಿಸಿರುವುದರಿಂದ ತಮ್ಮ ಮುಂದಿನ ಚಿತ್ರ ಪುನೀತ್ ಅಭಿನಯದ `ದೊಡ್ಮನೆ ಹುಡುಗ' ದ ಜೊತೆಜೊತೆಗೆ ಈ ಸಿನಿಮಾವನ್ನೂ ಪೂರೈಸಲಿದ್ದಾರಂತೆ.