ಕನ್ನಡದಲ್ಲಿ ಮತ್ತೊಂದು ಹಾರರ್ ಚಿತ್ರ 
ಸಿನಿಮಾ ಸುದ್ದಿ

ಕನ್ನಡದಲ್ಲಿ ಮತ್ತೊಂದು ಹಾರರ್ ಚಿತ್ರ ಹಾಜರ್

ಕನ್ನಡದಲ್ಲಿ ಈಗ ಭೂತ, ಪ್ರೇತ ಹಾಗೂ ದೆವ್ವಗಳದ್ದೇ ಕಾರುಬಾರು. ಸಾಲದಕ್ಕೆ ಹಾರರ್ ಬೇರೆ. ಅಂದರೆ ಹಿಂದಿಗಿಂತಲೂ ಈ ವರ್ಷ ಹಾರರ್ ಕಂ ಪ್ರೇತ ಸಿನಿಮಾಗಳ ಸಂಖ್ಯೆಯ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚಾಗಿದೆ...

ಕನ್ನಡದಲ್ಲಿ ಈಗ ಭೂತ, ಪ್ರೇತ ಹಾಗೂ ದೆವ್ವಗಳದ್ದೇ ಕಾರುಬಾರು. ಸಾಲದಕ್ಕೆ ಹಾರರ್ ಬೇರೆ. ಅಂದರೆ ಹಿಂದಿಗಿಂತಲೂ ಈ ವರ್ಷ ಹಾರರ್ ಕಂ ಪ್ರೇತ ಸಿನಿಮಾಗಳ ಸಂಖ್ಯೆಯ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚಾಗಿದೆ.

ಏನಿಲ್ಲವೆಂದರೂ ಈ ವರ್ಷದ ಅಂತ್ಯದೊಳಗೆ 40ಕ್ಕೂ ಹೆಚ್ಚು ಭೂತ ಸಿನಿಮಾಗಳು ತೆರೆಗೆ ಅಪ್ಪಳಿಸಬಹುದು. ದೆವ್ವಗಳ ಬೆನ್ನತ್ತಿಕೊಂಡು ಹೋಗಿ ಸಿನಿಮಾ ಮಾಡಿ ಪ್ರೇಕ್ಷಕನ ಕಣ್ಣಲ್ಲಿ ಹಾರರ್ ಸೃಷ್ಟಿಸುತ್ತಿರುವವರಲ್ಲಿ ಹೊಸ ನಿರ್ದೇಶಕರೇ ಹೆಚ್ಚು. ಇದ್ದಕ್ಕಿದಂತೆ ಹಾರರ್ ಸಿನಿಮಾಗಳು ಹೆಚ್ಚಾಗುವುದಕ್ಕೆ ಕಾರಣ ಕೆಲ ತಿಂಗಳುಗಳ ಹಿಂದೆ ಬಿಡುಗಡೆಯಾದ 6-5=2 ಎನ್ನುವ ಚಿತ್ರ ಎಂಬುದು ಅನುಮಾನವಿಲ್ಲದೆ ಹೇಳಬಹುದು.

ಹೌದು, ಬಿಡಿಗಾಸಿನಲ್ಲಿ ತಯಾರಾದ ಈ 6-5=2 ಚಿತ್ರ ದೊಡ್ಡ ಮಟ್ಟದಲ್ಲೇ ಗಂಟು ಮಾಡಿಕೊಂಡು ಬಾಲಿವುಡ್ ಅಂಗಳದ ಕದ ತಟ್ಟಿ ಬಂದಿದ್ದು ಕೂಡ ಈ ಚಿತ್ರದ ಸಾಧನೆ. ಈಗ ಇದೇ ಚಿತ್ರದ ಯಶಸ್ಸಿನ ಅಲೆಯಲ್ಲಿ ಸರದಿಯಂತೆ ದೆವ್ವದ ಸಿನಿಮಾಗಳು ಸೆಟ್ಟೇರಿವೆ. ಅಂಥ ಚಿತ್ರಗಳ ಒಟ್ಟು ಸಂಖ್ಯೆ 40. ಈ ಸಂಖ್ಯೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಸಿನಿಮಾ `ತಮಿಸ್ರ'. ಯುವ ಪ್ರತಿಭೆಗಳೇ ಸೇರಿ ಮಾಡಿರುವ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಪ್ರೇಕ್ಷಕರನ್ನು ಹೆದರಿಸುವುದಕ್ಕಾಗಿಯೇ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.

ಈ ನಡುವೆ ಹಾರರ್ ಚಿತ್ರಕ್ಕಾಗಿಯೇ ಒಂದು ವಿಶೇಷವಾದ ಗೀತೆಯನ್ನು ಚಿತ್ರೀಕರಣ ಮಾಡಿದ್ದಾರೆ. ಅದು ಕೂಡ ಚಿತ್ರದ ಪ್ರಮೋಷನ್ ಗಾಗಿಯೇ ಈ ಹಾಡನ್ನು ಮೇಕಿಂಗ್ ಮಾಡಲಾಗಿದೆ. ಆ ಮೂಲಕ ದೆವ್ವದ ಸಿನಿಮಾ ಆದರೂ ಹೊಸತನ ಮೆರೆದಿದ್ದೇವೆ ಎಂಬುದು ಚಿತ್ರತಂಡದ ಅಭಿಪ್ರಾಯ. ಈಗಾಗಲೇ ಈ ಚಿತ್ರದ ಪ್ರೊಮೋ ಬಿಡುಗಡೆಯಾಗಿದ್ದು, ಅದು ಯೂಟ್ಯೂಬ್ ನಲ್ಲಿ ಸೌಂಡು ಮಾಡುತ್ತಿದೆ. ಕೇವಲ ಪ್ರೊಮೋ ಮಾತ್ರವಲ್ಲ, ಚಿತ್ರದ ಹಾಡನ್ನೂ ಕೂಡ ಇಂಟರ್‍ನೆಟ್‍ನಲ್ಲೇ ಬಿಡುಗಡೆ ಮಾಡುವ ಮೂಲಕ `ತಮಿಸ್ರ' ಚಿತ್ರ, ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದೆ.

ಈ ಚಿತ್ರದ ನಿರ್ದೇಶಕ ಪ್ರಕಾಶ್ ಹಾಸನ್. ಇವರಿಗಿದು ಮೊದಲ ಸಿನಿಮಾ. ಅಂದಹಾಗೆ `ತಮಿಸ್ರ' ಎಂದರೆ ಗರುಡಪುರಾಣದಲ್ಲಿ ಬರುವ ಒಂದು ಶಿಕ್ಷೆಯ ಹೆಸರು. ತಪ್ಪು ಮಾಡಿ ನರಕ ಸೇರುವವರಿಗೆ ಈ ಗರುಡಪುರಾಣದಲ್ಲಿರುವ ಶಿಕ್ಷೆಗಳನ್ನೇ ವಿಧಿಸಿಲಾಗುತ್ತದೆ. ತಮಿಳು ನಟ ವಿಕ್ರಮ್ ಅವರ `ಅನ್ನಿಯನ್' ಸಿನಿಮಾ ನೋಡಿದವರಿಗೆ ಈ ಗರುಡಪುರಾಣದ ಶಿಕ್ಷೆಗಳ ಬಗ್ಗೆ ಪರಿಚಯವಿರುತ್ತದೆ. ಇದರಲ್ಲಿನ ಶಿಕ್ಷೆಗಳ ಹೆಸರುಗಳ ಪೈಕಿ `ತಮಿಸ್ರ' ಕೂಡ ಒಂದು. ಕೊಂಚ ಭಿನ್ನವಾಗಿರಲಿ ಎನ್ನುವ ಕಾರಣಕ್ಕೆ ಸಂಸ್ಕೃತದಿಂದ ಕೂಡಿರುವ ಈ ಹೆಸರನ್ನೇ ಚಿತ್ರಕ್ಕೆ ನಾಮಕರಣ ಮಾಡಲಾಗಿದೆಯಂತೆ. ಆದರೆ, ಸಿನಿಮಾ ನೋಡಿದ ಪ್ರೇಕ್ಷಕ ತಾನೇ `ತಮಿಸ್ರ' ಶಿಕ್ಷೆಗೆ ಒಳಗಾಗದಿರಲಿ ಎಂಬುದು ದೆವ್ವದ ಮುಂದಿನ ಪ್ರಾರ್ಥನೆ!

ಸೆನ್ಸಾರ್ ಪ್ರಮಾಣ ಪತ್ರಕ್ಕಾಗಿ ಕ್ಯೂ ನಿಂತಿರುವ, ಆರ್‍ಎಂಎನ್ ಪ್ರೊಡಕ್ಷನ್ ಬ್ಯಾನರ್‍ನಡಿ ನಿರ್ಮಾಣವಾಗಿರುವ ಈ ಚಿತ್ರದ ನಿರ್ಮಾಪಕ ನಾಗರಾಜ್, . ಚಿತ್ರದ ನಾಯಕ ಶಿವು, ನಾಯಕಿ ಕಾವ್ಯ. ಮತ್ತೊಂದು ವಿಶೇಷ ಅಂದರೆ ಈ ಚಿತ್ರಕ್ಕೆ ದೆವ್ವದ ಹಾಡು ಬರೆದಿರುವುದು ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್. `ತಮಿಸ್ರ' ಚಿತ್ರವನ್ನು ನೋಡಿದ ಪ್ರೇಕ್ಷಕ ಯಾವ ಪಾಟಿ ಹೆದರಿಕೊಳ್ಳುತ್ತಾನೆ ಎನ್ನುವುದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT