ಬೆಂಗಳೂರು: 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು 'ನಾನು ಅವನಲ್ಲ ಅವಳು' ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಸಂಚಾರಿ ವಿಜಯ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
I Am Vidya: A Transgender’s Journey by ‘Living Smile’ Vidya ಎಂಬ ಪುಸ್ತಕದ ಕತೆಯನ್ನಾಧರಿಸಿ ಬಿ.ಎಸ್ ಲಿಂಗದೇವರು ನಿರ್ದೇಶಿಸಿದ 'ನಾನು ಅವನಲ್ಲ ಅವಳು'ಸಿನಿಮಾದಲ್ಲಿನ ಅಭಿನಯಕ್ಕಾಗಿ ವಿಜಯ್ ಪ್ರಶಸ್ತಿ ಗಳಿಸಿದ್ದಾರೆ.
ರಂಗಭೂಮಿ ಪ್ರತಿಭೆಯಾಗಿರುವ ಸಂಚಾರಿ ವಿಜಯ್ ಅವರ ಹೆಸರಿನಲ್ಲಿರುವ 'ಸಂಚಾರಿ' ಅವರ ನಾಟಕ ತಂಡದ ಹೆಸರು. ಕಡೂರು ತಾಲೂಕಿನ ಪಂಚನಹಳ್ಳಿ ಊರಿನ ವಿಜಯ್ ಓದಿದ್ದು ಇಂಜಿನಿಯರಿಂಗ್. ನಟ ನಿರ್ದೇಶಕನಾಗಿ ರಂಗಭೂಮಿಯಲ್ಲಿ ಗುರುತಿಸಿಕೊಂಡಿರುವ ವಿಜಯ್ ಈ ಬಾರಿ ಶ್ರೇಷ್ಠ ಪ್ರಾದೇಶಿಕ ಸಿನಿಮಾ ಪ್ರಶಸ್ತಿ ಗಳಿಸಿದ ಹರಿವು ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾರೆ.
ಇನ್ನೊಂದು ವಿಶೇಷವೇನೆಂದರೆ ಅತ್ಯುತ್ತಮ ನಟ ಪ್ರಶಸ್ತಿಯ ರೇಸ್‌ನಲ್ಲಿ ಅಮೀರ್ ಖಾನ್ , ಮಮ್ಮೂಟ್ಟಿ ಮತ್ತು ಶಾಹೀದ್ ಕಪೂರ್ ಮೊದಲಾದ ಘಟಾನುಘಟಿ ನಟರಿದ್ದರು. ಇವರನ್ನೆಲ್ಲ ಹಿಂದಿಕ್ಕಿ ಕನ್ನಡಿಗರಾದ ವಿಜಯ್ ಪ್ರಶಸ್ತಿ ಗಳಿಸಿರುವುದು ಅವರ ಅರ್ಹತೆಗೆ ಸಂದ ಗೌರವ.
ಮಂಗಳಮುಖಿ ಜೀವನಾಧರಿತ ಕಥೆಯಾದ ನಾನು ಅವನಲ್ಲ ಅವಳು ಸಿನಿಮಾದಲ್ಲಿ ಮಂಗಳಮುಖಿಯರ ಭಾವನೆಗಳನ್ನು ತಾಕಲಾಟಗಳನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಆ ಪಾತ್ರಕ್ಕೆ ಜೀವ ತುಂಬಿದ ವಿಜಯ್ ಪ್ರಸ್ತುತ ಪಾತ್ರ ನಿರ್ವಹಿಸುವುದಕ್ಕಾಗಿ ಮಂಗಳಮುಖಿಯರು ವಾಸಿಸುವ ಸ್ಥಳಕ್ಕೆ ತೆರಳಿ ಅವರ ಜೀವನವನ್ನು ಹತ್ತಿರದಿಂದ ನೋಡಿದ್ದಾರೆ. ಮಾತ್ರವಲ್ಲದೆ ನನಗೆ ಈ ಪಾತ್ರವನ್ನು ನಿರ್ವಹಿಸಲು ಮಂಗಳಮುಖಿಯರೇ ಸಹಾಯ ಮಾಡಿದ್ದಾರೆ ಎಂದು ವಿಜಯ್ ಹೇಳಿದ್ದಾರೆ.