ಸಿನಿಮಾ ಸುದ್ದಿ

ಆಫ್ರಿಕಾಕ್ಕೆ ಹಾರಿದ ಸುದೀಪ್ 'ಈಗ'

Srinivasamurthy VN

ಹೈದರಾಬಾದ್: ಕನ್ನಡಿಗ ಕಿಚ್ಚ ಸುದೀಪ್ ಈ ಹಿಂದೆ ಅಭಿನಯಿಸಿದ್ದ ತೆಲುಗಿನ ಚಿತ್ರ "ಈಗ" ಆಫ್ರಿಕಾಕ್ಕೆ ಹಾರಿದ್ದು, ಆಫ್ರಿಕಾ ಖಂಡದ ಬಹುತೇಕ ದೇಶಗಳಲ್ಲಿ ಬಳಸಲಾಗುವ ಸ್ವಾಹಿಲಿ ಭಾಷೆಗೆ ಈಗ ಚಿತ್ರ ಡಬ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ತೆಲುಗು ಚಿತ್ರರಂಗದಲ್ಲಿ ಜಕ್ಕನ್ನ ಎಂದೇ ಖ್ಯಾತರಾಗಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಈಗ ಚಿತ್ರ ಭಾರತದಲ್ಲಿ ವಿವಿಧ ಭಾಷೆಗಳಿಗೆ ಡಬ್ ಯಶಸ್ಸುಗೊಂಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಇದೇ ಈಗ ಚಿತ್ರ ಇದೀಗ ಆಫ್ರಿಕಾ ಖಂಡದಲ್ಲಿಯೂ ಭಾರಿ ಚರ್ಚೆಗೆ ಕಾರಣವಾಗಿದ್ದು, ಆಫ್ರಿಕಾ ಖಂಡದ ಬಹುತೇಕ ರಾಷ್ಟ್ರಗಳಲ್ಲಿ ಬಳಕೆ ಮಾಡಲಾಗುವ ಸ್ವಾಹಿಲಿ ಭಾಷೆಗೆ ಸುದೀಪ್ ಅಭಿನಯದ ಈಗ ಚಿತ್ರ ಡಬ್ ಆಗಿದೆ. ಚಿತ್ರಕ್ಕೆ ಇಂಜಿ (ನೊಣ) ಎಂದು ಹೆಸರಿಡಲಾಗಿದ್ದು, ಚಿತ್ರವು ಕೀನ್ಯಾ, ಟಾಂಜೇನಿಯಾ, ಉಗಾಂಡ, ರವಾಂಡಾ, ಬುರುಂಡಿ ಮತ್ತು ಕಾಂಗೋ ದೇಶಗಳಲ್ಲಿ ಬಿಡುಗಡೆಯಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ತಮ್ಮ ಸಂತಸ ಹಂಚಿಕೊಂಡಿರುವ ನಿರ್ದೇಶಕ ರಾಜಮೌಳಿ ಅವರು, ತೆಲುಗು ಚಿತ್ರವೊಂದು ಆಫ್ರಿಕನ್ ಭಾಷೆಗೆ ಡಬ್ ಆಗಿರುವುದು ತುಂಬಾ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.



ಇದಕ್ಕೂ ಮೊದಲು ಇದೇ ಈಗ ಚಿತ್ರ ಚೀನಿ ಭಾಷೆಗೂ ಡಬ್ ಆಗಿ ಅಲ್ಲಿಯೂ ಭರ್ಜರಿ ಯಶಸ್ಸು ಕಂಡಿತ್ತು. ಚಿತ್ರದಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ಅವರು ಖಳನಟನ ಪಾತ್ರದಲ್ಲಿ ಅಭಿನಯಿಸಿದ್ದು, ಈ ಮೂಲಕ ಕಿಚ್ಚ ಸುದೀಪ್ ರ ಕಿರೀಟಕ್ಕೀಗ ಮತ್ತೊಂದು ಗರಿ ಮೂಡಿದ್ದು, ಈ ಮೂಲಕ ಕಿಚ್ಚ ಸುದೀಪ್ ಅವರ ಹೆಸರು ಅಂತರಾಷ್ಟ್ರೀಯ ಮಟ್ಟಕ್ಕೂ ಏರಿದಂತಾಗಿದೆ.

SCROLL FOR NEXT