ಬೆಂಗಳೂರು: ನಿರ್ದೇಶಕ ನಾಗಶೇಖರ್, ಆರ್ ಎಸ್ ನಿರ್ಮಾಣ ಸಂಸ್ಥೆಯೊಂದಿಗೆ ದೊಡ್ಡ ಬಜೆಟ್ ಚಿತ್ರವೊಂದಕ್ಕೆ ಕೈಹಾಕಿದ್ದಾರೆ. ದಕ್ಷಿಣ ಭಾರತದ ೪ ಭಾಷೆಗಳಲ್ಲಿ ನಿರ್ಮಾಣಗೊಳ್ಳಲಿರುವ ಈ ಸಿನೆಮಾದ ಬಜೆಟ್ ೧೫ ಕೋಟಿ ಎಂದು ಯೋಜಿಸಲಾಗಿದೆ. ಕನ್ನಡ ಅವತರಿಣಿಕೆಗೇ ೧೨ ಕೋಟಿ ವಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರ ವಿಷಯ ಸಾರ್ವತ್ರಿಕವಾಗಿರುವುದರಿಂದ ಹಾಗು ಮುಖ್ಯಭೂಮಿಕೆಯಲ್ಲಿ ನಿತ್ಯಾ ಮೆನನ್ ನಟಿಸುತ್ತಿರುವುದರಿಂದ ಕನ್ನಡಕ್ಕಷ್ಟೇ ಏಕೆ ಸೀಮಿತಗೊಳಿಸಬೇಕು ಎಂದು ಚಿಂತಿಸಿ ಇತರ ಭಾಷೆಗಳಲ್ಲೂ ನಿರ್ಮಿಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ನಿರ್ದೇಶಕ ನಾಗಶೇಖರ್.
ಕನ್ನಡ ಅವತರಿಣಿಕೆಗೆ ನಟ ಚೇತನ್ ಅವರನ್ನು ಅಂತಿಮಗೊಳಿಸಿದ್ದು, ಇತರ ಭಾಷೆಗಳಿಗೆ ಬೇರೆ ನಾಯಕ ನಟರನ್ನು ಹಾಕಿಕೊಳ್ಳುವ ಚಿಂತನೆಯಲ್ಲಿದ್ದಾರೆ ರಾಜಶೇಖರ್. "ತಮಿಳಿಗೆ ಸಿದ್ಧಾರ್ಥ್ ಅಥವಾ ದಲ್ಕ್ವೇರ್ ಸಲ್ಮಾನ್ ಅವನ್ನು ಎದುರು ನೋಡುತ್ತಿದ್ದೇನೆ ತೆಲುಗಿಗೆ ನಾಣಿ ಅವರನ್ನು ಕೇಳುತ್ತೇನೆ. ಈ ನಟರ ಜೊತೆ ಚರ್ಚಿಸಲು ನಾಳೆ ಚೆನ್ನೈಗೆ ತೆರಳುತ್ತಿದ್ದೇನೆ" ಎನ್ನುತ್ತಾರೆ ನಾಗಶೇಖರ್.
ತಮಿಳು ಮತ್ತು ತೆಲುಗು ಬಾಷೆಗಳಲ್ಲಿ ಈಗಾಗಲೇ ಶೀರ್ಷಿಕೆಗಳನ್ನು ಅಂತಿಮಗೊಳಿಸಿದ್ದು ಕನ್ನಡ ಮತ್ತು ಮಲಯಾಳಮ್ ಗೆ ಒಳ್ಳೆಯ ಶೀರ್ಷಿಕೆಯ ಹುಡುಕಾಟದಲ್ಲಿದ್ದಾರೆ ನಾಗಶೇಖರ್. "ತಮಿಳು ಶೀರ್ಷಿಕೆ ಎಥಿರ್ಗಾಳಮ್ ಎಂದಿದ್ದು ತೆಲುಗಿನಲ್ಲಿ ಅಪ್ಪಡಪ್ಪುಡು ಎಂದಿದೆ. ಕನ್ನಡದಲ್ಲಿ ಮೊದಲು ರಾಜಾ ರಾಣಿ ಎಂದು ಕರೆಯುವುದಾಗಿತ್ತು ಆದರೆ ರಾಜ ಮತ್ತು ರಾಣಿ ಪದಗಳು ಅತಿ ಸಾಮಾನ್ಯ ಎಂದೆನಿಸಿ ಹೊಸ ಶೀರ್ಷಿಕೆಯ ಹುಡುಕಾಟದಲ್ಲಿದ್ದೇನೆ" ಎನ್ನುತ್ತಾರೆ ನಿರ್ದೇಶಕ.
ಈ ಹಿಂದೆ ನಾಗಶೇಖರ್ ಚೇತನ್ ಮತ್ತು ನಿತ್ಯಾ ಮೆನನ್ ನಟನೆಯ 'ಮೈನಾ' ಸಿನೆಮಾ ನಿರ್ದೇಶಿಸಿದ್ದರು.