ಬೆಂಗಳೂರು: ಆನೆ ನಡೆದದ್ದೇ ದಾರಿ ಎಂಬುದು ನಾನ್ನುಡಿ. ವೃತ್ತಿ ಜೀವನದಲ್ಲಿ ಆನೆಯಂತೆಯೇ ಬೆಳೆದಿರುವ ದರ್ಶನ್, ತಾವು ನಟಿಸುತ್ತಿರುವ ಸಿನೆಮಾ 'ಐರಾವತ'ದ ಪ್ರಗತಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಗರಂ ಆಗಿದ್ದಾರೆ. "ಹಲವರು ನಾನು 'ಐರಾವತ'ದಲ್ಲಿ ನಾನು ಹೀರೋ ಎಂದುಕೊಂಡಿದ್ದಾರೆ, ಆದರೆ ಇಲ್ಲಿ ನನ್ನನ್ನು ಜೂನಿಯರ್ ನಟನ ಮಟ್ಟಕ್ಕೆ ಇಳಿಸಿದ್ದಾರೆ. ನನ್ನನ್ನು ಮತ್ತು ನಿರ್ಮಾಪಕ ಸಂದೇಶ್ ನಾಗರಾಜ್ ಅವರನ್ನು ಬಲಿಪಶುಗಳನ್ನಾಗಿಸಿದ್ದಾರೆ. ಯೋಜನೆಯಂತೆಯೆ ಸಿನೆಮಾ ನಡೆಯುವುದು ನಮ್ಮ ಆಶಯವಾಗಿದ್ದರೂ ನಿರ್ದೇಶಕ ಎ ಪಿ ಅರ್ಜುನ್ ಅವರಿಗೆ ಶಿಸ್ತಿಲ್ಲ. ಐರಾವತದಲ್ಲಿ ಅವರ ಜೊತೆ ಕೆಲಸ ಮಾಡಿ ನಮಗೆ ತಿಳಿದಿರುವುದೇನೆಂದರೆ ಅವರು ವೃತ್ತಿಪರರಲ್ಲ ಹಾಗೂ ಅಹಂಕಾರಿ" ಎಂದು ನಟ ದರ್ಶನ್ ದೂರಿದ್ದಾರೆ.
ಸಿನೆಮಾ ಚಿತ್ರೀಕರಣ ಅಂತಿಮ ಘಟ್ಟಕ್ಕೆ ಬಂದಿದ್ದು ಒಂದು ಹೊಡೆದಾಟದ ದೃಶ್ಯ ಮತ್ತು ಊರ್ವಶಿ ರೌಟೆಲಾ ಅವರೊಂದಿಗಿನ ಡ್ಯುಯೆಟ್ ಸೇರಿದಂತೆ ಮೂರು ಹಾಡುಗಳಷ್ಟೇ ಬಾಕಿಯಿದ್ದರೂ ಇವುಗಳು ಮುಗಿಯುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಸ್ಲೊವೇನಿಯಾದಲ್ಲಿ ಜೂನ್ ೩ ಕ್ಕೆ ಚಿತ್ರೀಕರಣ ಯೋಜನೆಯಾಗಿತ್ತಾದರೂ, ನಟಿಯ ಡೇಟ್ ಸಿಗದ ಕಾರಣ ಚಿತ್ರೀಕರಣ ಇನ್ನು ಮುಂದೆ ಹೋಗಿದೆ. "ನಾವು ಊರ್ವಶಿ ಅವರನ್ನು ದೂಷಿಸುವಂತಿಲ್ಲ. ಅವರು ಕಳೆದ ನವೆಂಬರ್ ನಿಂದ ಈ ವರ್ಷದ ಮಾರ್ಚ್ ವರೆಗೆ ತಮ್ಮ ಸಮಯ ನೀಡಿದ್ದರು. ಆ ಸಮಯದಲ್ಲಿ ಅವರನ್ನು ಉಪಯೋಗಿಸಿಕೊಳ್ಳಲಿಲ್ಲ. ಈಗ ಅವರ ನಟನೆಗೆ ನೀಡಿದ ಹಣಕ್ಕಿಂತಲೂ ಅವರ ಪ್ರಾಯಾಣಕ್ಕೆ ಹೆಚ್ಚು ಹಣ ವ್ಯಯಿಸಿದ್ದಾರೆ. ನಾನು ಹಿರಿಯ ನಟರ ಡೇಟ್ ಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಅನಂತ್ ನಾಗ್ ಅವರ ೧೦ ದಿನದ ಕಾಲ್ ಶೀಟ್ ಈಗ ೩೦ ದಿನಕ್ಕೆ ಲಂಬಿಸಿದೆ. ವಿ ಹರಿಕೃಷ್ಣ ಅವರಿಂದ ಇನ್ನೂ ಪ್ರಾರಂಭಿಕ ಹಾಡನ್ನು ಪಡೆದಿಲ್ಲ. ಹೀಗೆ ಪೂರ್ವ ಯೋಜನೆಯೇ ಇಲ್ಲದೆ ನಿರ್ದೇಶಕ ಕೆಲಸ ಮಾಡುತ್ತಿದ್ದಾರೆ" ಎನ್ನುತ್ತಾರೆ ನಟ ದರ್ಶನ್.
ನಿರ್ಮಾಪಕ ನನ್ನ ಗೆಳೆಯನಾಗಿರುವುದರಿಂದ ಇವೆಲ್ಲವನ್ನೂ ಸಹಿಸಿಕೊಂಡು ಪರಸ್ಪರ ಸಮಾಧಾನ ಹೇಳಿಕೊಂಡು ಸಿನೆಮಾ ಮುಗಿಸಲು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ದರ್ಶನ್.