ನವದೆಹಲಿ: ಧರ್ಮ ಹಾಗೂ ಜಾತಿ ಹೆಸರಿನ ವಿಭಜನೆ ಎಂದು ನಿಜಕ್ಕೂ ಅಸಹ್ಯಕರ ಹಾಗೂ ಭಯ ಹುಟ್ಟಿಸುವ ವಿಚಾರ ಎಂದು ಬಾಲಿವುಡ್ ನಟಿ ಸೋನಮ್ ಕಪೂರ್ ಗುರುವಾರ ಹೇಳಿದ್ದಾರೆ.
ಬಾಲಿವುಡ್ ಬಹು ನಿರೀಕ್ಷಿತ ಚಿತ್ರ ಎಂದೇ ಹೇಳಲಾಗುತ್ತಿರುವ ಪ್ರೇಮ್ ರತನ್ ಧನ್ ಪಾಯೋ ಚಿತ್ರದ ಪ್ರಚಾರಕ್ಕಾಗಿ ನಟ ಸಲ್ಮಾನ್ ಖಾನ್ ಅವರೊಂದಿಗೆ ದೆಹಲಿಗೆ ಆಗಮಿಸಿದ್ದ ಸೋನಮ್ ಕಪೂರ್ ಅವರು, ಧರ್ಮ ಹಾಗೂ ಜಾತಿ ಹೆಸರಿನಲ್ಲಿ ವಿಭಜನೆ ಮಾಡುತ್ತಿರುವುದು ನಿಜಕ್ಕೂ ಸ್ವೀಕಾರಾರ್ಹವಲ್ಲದ ಹಾಗೂ ಅಸಹ್ಯ ಹುಟ್ಟಿಸುವ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಚಿತ್ರ ಪ್ರಚಾರಕ್ಕಾಗಿ ಆಗಮಿಸಿದ್ದ ನಟ ಸಲ್ಮಾನ್ ಖಾನ್ ಅವರ ಬಳಿ ಮಾಧ್ಯಮಗಳು ದೇಶದ ವಿವಾದಾತ್ಮಕ ವಿಚಾರವಾಗಿರುವ ಅಸಹಿಷ್ಣುತೆ ಕುರಿತಂತೆ ಪ್ರತಿಕ್ರಿಯೆ ನೀಡುವಂತೆ ಕೇಳಿದ್ದವು. ಈ ವೇಳೆ ಮಧ್ಯ ಪ್ರವೇಶಿಸಿದ ಸೋನಮ್ ಕಪೂರ್ ಅವರು, ಅಸಹಿಷ್ಣುತೆ ಕುರಿತಂತೆ ನಾನು ಉತ್ತರ ನೀಡಿದರೆ ಸರಿ ಇರುತ್ತದೆ ಎಂಬುದು ನನ್ನ ಅನಿಸಿಕೆಯಾಗಿದೆ. ಈ ಬಗ್ಗೆ ನಾನು ಉತ್ತರ ನೀಡುತ್ತೇನೆ. ಅಸಹಿಷ್ಣುತೆ ಅಥವಾ ಇನ್ನಾವುದೇ ವಿಚಾರವಾಗಿರಲಿ ಅವುಗಳ ಕುರಿತಂತೆ ಸೂಕ್ತ ಸಾಕ್ಷ್ಯವಿಲ್ಲದೇ ಹೇಳುವುದು ನಿಜಕ್ಕೂ ಸರಿಯಾದುದಲ್ಲ. ಇಂತಹದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೇವಲ ಧರ್ಮ ಹಾಗೂ ಜಾತಿ ಹೆಸರಿನಲ್ಲಿ ವಿಭಜನೆ ಮಾಡುವ ವಿಚಾರ ನಿಜಕ್ಕೂ ಅಸಹ್ಯ ಹುಟ್ಟಿಸುವ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಪ್ರೇಮ್ ರತನ್ ಧನ್ ಪಾಯೋ ಚಿತ್ರ ಕೂಡ ಪ್ರತೀ ಹಾಗೂ ಸಹಿಷ್ಣುತೆ ಕುರಿತಂತಾದ ಚಿತ್ರವಾಗಿದ್ದು, ಚಿತ್ರದಲ್ಲಿ ಕುಟುಂಬದ ಪ್ರಾಮುಖ್ಯತೆ ಇದೆ. ಚಿತ್ರದ ಕುರಿತಂತೆ ತುಂಬಾ ಕುತೂಹಲ ಇದೆ. ಚಿತ್ರ ನವೆಂಬರ್ 12ರಂದು ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.