ಕನ್ನಡದ ಅತಿ ಬ್ಯುಸಿ ನಟಿ ಈಗ ಹಿಂದಿ ನಿರ್ದೇಶಕರಿಗೆ ಕಾಲ್‍ಶೀಟ್ ಕೊಟ್ಟಿದ್ದಾಳೆ. ಹೌದು, ಕೃತಿ ಖರಬಂದ ಮುಂಬೈನತ್ತ ಮುಖ ಮಾಡಿದ್ದಾಳೆ. `ಮಿಂಚಾಗಿ ನೀನು ಬರಲು', `ಬ್ರೂಸ್‍ಲೀ', `ದಳಪತಿ' ಸೇರಿದಂತೆ ಏಳೆಂಟು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ಕೃತಿ ಹಿಂದಿಯ `ರಾಝ್ 4'ನಲ್ಲಿ ನಟಿಸುತ್ತಿದ್ದಾಳೆ.
ಅದೂ ಕಿಸ್ ಬಾಯ್ ಇಮ್ರಾನ್ ಹಶ್ಮಿ ಜೊತೆಗೆ! ಹಾರರ್ ಕಮ್ ಥ್ರಿಲ್ಲರ್ ಕಥೆಯುಳ್ಳ `ರಾಝ್' ಸರಣಿಯ ಹಿಂದಿನ ಚಿತ್ರಗಳೆಲ್ಲ ಸೂಪರ್ ಹಿಟ್ ಆಗಿವೆ. ಹಾಲಿವುಡ್‍ನಲ್ಲೂ ರಾಝ್ ಸರಣಿಯ ಚಿತ್ರಗಳು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದವು. ಅದರ ಪ್ರೇರಣೆಯಿಂದಲೇ ಬಾಲಿವುಡ್‍ನಲ್ಲಿ ರಾಝ್ ಹವಾ ಸೃಷ್ಟಿಸಿದರು ನಿರ್ದೇಶಕ ವಿಕ್ರಮ್ ಭಟ್.
ಇಮ್ರಾನ್ ಹಶ್ಮಿಗೆ ಬೇರೆಯದ್ದೇ ಇಮೇಜ್ ತಂದುಕೊಟ್ಟಿರುವ ರಾಝ್ ಚಿತ್ರಗಳಲ್ಲಿ ಈ ಹಿಂದೆ ಸ್ಟಾರ್ ನಟಿಯರೇ ನಟಿಸಿದ್ದಾರೆ. ಮೊದಲ ಭಾಗದಲ್ಲಿ ಡಿನೋ ಮೊರಿಯಾ ಜೊತೆಗೆ ಬಿಪಾಶಾ ಬಸು ನಟಿಸಿದ್ದಳು. ಎರಡನೆಯದರಲ್ಲಿ ಇಮ್ರಾನ್ ಹಶ್ಮಿಯೊಂದಿಗೆ ಕಂಗನಾ ರಣಾವತ್ ಕಣ್ಮನ ಸೆಳೆಯುವಂತೆ ಅಬಿsನಯ ತೋರಿದ್ದಳು.
ಮೂರನೇ ಭಾಗದಲ್ಲಿ ಇಶಾ ಗುಪ್ತಾ ನಾಯಕಿ ಪಾತ್ರದ ಹೊಣೆ ಹೊತ್ತಿದ್ದಳು. ಈಗ ಕೃತಿ ಖರಬಂದಳ ಸರದಿ. ಇಮ್ರಾನ್ ಹಶ್ಮಿ ಎಲ್ಲಿರುತ್ತಾನೋ, ಅಲ್ಲಿ ರೊಮ್ಯಾನ್ಸ್ ದೃಶ್ಯಗಳೂ ಹಾಜರಿ ಹಾಕಿರುತ್ತವೆ. ಈ `ರಾಝ್ 4'ನಲ್ಲೂ ಅಷ್ಟೇ.
ಸಾಂಪ್ರದಾಯಿಕ ನಟನೆಯಿಂದ, ಬೋಲ್ಡ್ ನಟನೆಯತ್ತ ಜಿಗಿಯಬೇಕಾದ ಅನಿವಾರ್ಯತೆ ಈ `ಗೂಗ್ಲಿ' ಹುಡುಗಿಗೆ ಇದೆ. ತ್ರಿಕೋನ ಪ್ರೇಮಕತೆಯಿರುವ ಈ ಚಿತ್ರದಲ್ಲಿ ಗೌರವ್ ಅರೋರಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್‍ನಿಂದ ಶೂಟಿಂಗ್ ಆರಂಭವಾಗಲಿದೆ. ಜುಲೈನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.