ಬೆಂಗಳೂರು: 'ಲವ್ ಸ್ಟೊರಿಗಳಿಗೆ" ಮಾಂತ್ರಿಕ ದೃಶ್ಯ ಸ್ಪರ್ಶ ನೀಡುವ ಮಳೆ ನಿರ್ದೇಶಕ ಯೋಗರಾಜ್ ಭಟ್ ಮತ್ತೆ ಅದೇ ಟ್ರ್ಯಾಕಿಗೆ ಹಿಂದಿರುಗಿದ್ದಾರಂತೆ.
ಮುಂಗಾರು ಮಳೆ, ಗಾಳಿಪಟ ಇತ್ಯಾದಿಗಳ ಸೃಷ್ಟಿಕರ್ತ ಯೋಗರಾಜ್ ಲವ್ ಟ್ರ್ಯಾಕ್ ಇದ್ದರೂ ಅದನ್ನು ಮೀರಿದ್ದ ಡ್ರಾಮ, ವಾಸ್ತು ಪ್ರಕಾರ ಚಿತ್ರಗಳನ್ನೂ ನಿರ್ದೇಶಿಸಿದ್ದರು. ಈಗ ದುನಿಯಾ ವಿಜಯ್ ಮತ್ತು ಪ್ರಿಯಾಮಣಿ ನಟನೆಯ 'ದನ ಕಾಯೋನು' ಬಹುತೇಕ ಮುಗಿಸಿದ್ದು "ಹೌದು ಗಾಳಿಪಟದ ನಂತರ ಮತ್ತೆ ಲವ್ ಸ್ಟೋರಿಗೆ ಹಿಂದಿರುಗಿದ್ದೇನೆ" ಎನ್ನುತ್ತಾರೆ.
ಪ್ರೀತಿಯ ಕಥೆಗಳು ಕ್ಲೀಶೆಯಾಗಿದ್ದರಿಂದ ಬೇರೆ ಬೇರೆಯದ್ದನ್ನು ಪ್ರಯತ್ನಿಸಿದ್ದಾಗಿ ತಿಳಿಸುವ ಯೋಗರಾಜ್ "ಯಾವುದೋ ಒಂದು ಐಡಿಯಾ ತಲೆಯಲ್ಲಿ ಹೊಳೆದು ಮತ್ತೆ ಪ್ರೇಮ ಕಥೆಯನ್ನು ಬರೆಯಲು ಪ್ರಾರಂಭಿಸಿದೆ. ಈಗ ದನ ಕಾಯೋನು ಮುಗಿದಿರುವುದರಿಂದ ಹೊಸ ಸ್ಕ್ರಿಪ್ಟ್ ಮೇಲೆ ಕೆಲಸ ಪ್ರಾರಂಭಿಸಬಹುದು" ಎನ್ನುತ್ತಾರೆ ಯೋಗರಾಜ್.
ಈ ಸಿನೆಮಾದಲ್ಲಿ ಆಕಾಶ್ ನಾಗಪಾಲ್ ಎಂಬ ಯುವ ನಟನನ್ನು ಪರಿಚಯಿಸಲಿದ್ದಾರಂತೆ. ಕಲಾ ನಿರ್ದೇಶಕ ಶಶಿಧರ್ ಅಡಪ ಅವರ ಸೂಚನೆಯ ಮೇರೆಗೆ ಆಕಾಶ್ ಅವರನ್ನು ನಾಯಕ ನಟನಾಗಿ ತೊಡಗಿಸಿಕೊಳ್ಳಲಿದ್ದಾರಂತೆ. ಇಬ್ಬರು ನಾಯಕನಟಿಯರು ಇರಲಿದ್ದಾರೆ ಎಂದು ಕೂಡ ನಿರ್ದೇಶ ಕ ತಿಳಿಸಿದ್ದಾರೆ.