ಸಿನಿಮಾ ಸುದ್ದಿ

ತ್ರಿಕೋನ ಪ್ರೇಮದಲ್ಲಿ ಪ್ರಿಯಾಂಕಾ!

ಅಮೃತವರ್ಷಿಣಿ, ಹೆಂಡ್ತಿಗೇಳ್ಬೇಡಿ, ಲಾಲಿ ಹೀಗೆ ಹಲವು ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿ ಚಿತ್ರರಂಗದಿಂದ ಮರೆಯಾಗಿದ್ದ ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ದಿನೇಶ್ ಬಾಬು ಅವರು ಇದೀಗ ನೈಜ ಕಥೆಯಾಧಾರಿತ ತ್ರಿಕೋನ ಪ್ರೇಮ ಕಥೆಯ ಸಿನಿಮಾವೊಂದನ್ನು ತಯಾರಿಸುತ್ತಿದ್ದು, ಇಷ್ಟು ದಿನ ಗೃಹಿಣಿ, ನಿರ್ಮಾಪಕಿ, ಕಾಸ್ಟ್ಯೂಮ್ ಡಿಸೈನರ್ ಆಗಿ ಕಾಲಕಳೆದ ಪ್ರಿಯಾಂಕಾ ಉಪೇಂದ್ರ ಈ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಲಿದ್ದಾರೆ.

ದಿನೇಶ್ ಬಾಬು ನಿರ್ದೇಶಿಸಿರುವ ಚಿತ್ರದ ಹೆಸರು 'ಪ್ರಿಯಾಂಕಾ'. ಅರೇ ಇದೇನು ಮತ್ತೆ ಪ್ರಿಯಾಂಕಾ ಅಂತಲೇ ಹೇಳುತ್ತಿದ್ದೀರಿ. ಚಿತ್ರದ ಹೆಸರು ಹೇಳಿ ಎಂದು ಕೇಳಬೇಡಿ. ಇದು ಚಿತ್ರದ ಹೆಸರೇ. ದಿನೇಶ್ ಬಾಬು ಇದೀಗ ನಿರ್ಮಾಣ ಮಾಡಿರುವ ಚಿತ್ರ ಮದುವೆಯಾಗಿರೋ ಹೆಣ್ಣೊಬ್ಬಳು ಬ್ಯಾಚುಲರ್ ಹುಡುಗನೊಬ್ಬನ ಪ್ರೇಮಕ್ಕೆ ಬಿದ್ದು ತೊಳಲಾಡಿರುವ ಕಥೆ.

"ಪ್ರಿಯಾಂಕಾ" ಚಿತ್ರವೊಂದು ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ನೈಜ ಕಥೆಯಾಧಾರಿತ ಚಿತ್ರವಾಗಿದೆ. ಇಂದಿನ ಸಮಾಜದಲ್ಲಿ ತೆರೆಮರೆಯಲ್ಲಿ ನಡೀತಿರೋ ಕಥೆಯೊಂದನ್ನು ಹಿಡಿದು ದಿನೇಶ್ ಬಾಬು "ಪ್ರಿಯಾಂಕಾ" ಎಂಬ ಶೀರ್ಷಿಕೆಯಡಿಯಲ್ಲಿ ಚಿತ್ರ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರಾಜ್ ತನಿಖಾಧಿಕಾರಿಯಾಗಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು "ಪ್ರಿಯಾಂಕಾ"ಳ ಲವರ್ ಬಾಯ್ ಆಗಿ ತೆಲುಗು ನಟ ತೇಜಸ್ ನಟಿಸಿದ್ದಾರೆ.

ಚಿತ್ರದ ಕಥೆ ಬಗ್ಗೆ ಮಾತನಾಡಿರುವ ದಿನೇಶ್ ಬಾಬು ಅವರು, "ಪ್ರಿಯಾಂಕಾ" ಚಿತ್ರವೊಂದು ನೈಜ ಘಟನೆಯಾಧಾರಿತ ಚಿತ್ರವಾಗಿದೆ. 27 ವರ್ಷದ ಯವಕನೊಬ್ಬ 34 ವರ್ಷದ ಮಹಿಳೆಯೊಂದಿಗೆ ಪ್ರೇಮದಲ್ಲಿ ಬಿದ್ದ ಕಥೆಯಿದು. ತನ್ನ ಪ್ರೇಯಸಿಯನ್ನು ಪಡೆಯುವ ಸಲುವಾಗಿ ಪ್ರಿಯಕರ ನಾನಾ ರೀತಿಯ ಕಷ್ಟ ಪಡುತ್ತಾನೆ. ಕೊನೆಗೆ ಪ್ರಿಯತಮೆಯನ್ನು ಬೇರೆ ದೇಶಕ್ಕೆ ಕರೆದುಕೊಂಡು ಹೋಗಲಾಗದ ಯುವಕ ಆಕೆಯ ಪತಿಯನ್ನೇ ಕೊಲ್ಲುತ್ತಾನೆ. ನಂತರ ಕೊಲೆ ಪ್ರಕರಣ ಬಯಲಿಗೆ ಬಂದು ಯವಕನನ್ನು ಜೈಲಿಗೆ ಹಾಕಲಾಗುತ್ತದೆ. ಪ್ರೀತಿಗಾಗಿ ಹತ್ಯೆ ಮಾಡಿದ ಮುಗ್ಧ ಯುವಕನೊಬ್ಬನ ಕಥೆಯಿದು. ಪ್ರಸ್ತುತ ಈ ಘಟನೆ ಇಂದಿಗೂ ಕೋರ್ಟ್ ನ ವಿಚಾರಣೆಯಲ್ಲಿದೆ.

ಚಿತ್ರದ ಕಥೆ ಬಹಳ ಆಳವಾಗಿದೆ. ಇದಕ್ಕೆ ಪ್ರಮುಖ ಕಾರಣ ಘಟನೆಯಲ್ಲಿ ಮಹಿಳೆ ಕೂಡ ಭಾಗಿಯಾಗಿರುವುದು. ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಸಮಾಜದಲ್ಲಿ ಬದುಕುವುದು ಬಹಳ ಕಷ್ಟ. ಅದರಲ್ಲೂ ಮಹಿಳೆಯರು ಬದುಕು ಸಾಗಿಸುವುದು ಬಹಳ ಕಷ್ಟ. ಇಂತಹ ಘಟನೆಯ ಸಣ್ಣ ಎಳೆಯನ್ನೇ ಹಿಡಿದು ಚಿತ್ರದ ಸಂಪೂರ್ಣ ಕಥೆಯನ್ನು ಹೆಣೆಯಲಾಗಿದೆ ಎಂದು ಹೇಳಿದ್ದಾರೆ.

SCROLL FOR NEXT