ವಿಶ್ವದ ಗಮನ ಸೆಳೆದ ಬ್ಲಾಕ್‍ಬಸ್ಟರ್ 'ಬಾಹುಬಲಿ'ಗೂ ಆರಂಭದಲ್ಲಿ ಇಷ್ಟು ಹಿಟ್ಸ್ ಸಿಕ್ಕಿರಲಿಕ್ಕಿಲ್ಲ. ಬಾಲಿವುಡ್ ದಿವಾ ಐಶ್ವರ್ಯ ರೈಯ ಕಮ್ ಬ್ಯಾಕ್ ಚಿತ್ರ 'ಜಝ್ಬಾ'ಕ್ಕೂ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಲೈಕ್ಸ್ ಸಿಕ್ಕಿರಲಿಲ್ಲ. ಆದರೆ `ಪುಲಿ' ಚಿತ್ರದ ಟ್ರೇಲರ್‍ಗೆ ಅಭಿಮಾನಿಗಳು ಈಗಲೇ ಹತ್ತು ಲಕ್ಷ ಲೈಕ್ ಕುಟ್ಟಿದ್ದಾರೆ! ಇದೊಂದು ದಾಖಲೆಯೇ ಸರಿ.
'ಪುಲಿ' ಚಿತ್ರ ಬಹುತಾರಾಗಣದ ಚಿತ್ರ ಎಂಬುದನ್ನು ಮರೆಯಕೂಡದು. ಇದರಲ್ಲಿ ಬಹುತೇಕ ಸಿನೆಹೋಕರ ಆರಾಧ್ಯ ದೈವ ಶ್ರೀದೇವಿ ಮರಳಿ ಬಂದಿದ್ದಾಳೆ. ತಮಿಳು ಪಡ್ಡೆಗಳ ರೋಲ್ ಮಾಡೆಲ್ ವಿಜಯ್ ಇದ್ದಾನೆ. ಕನ್ನಡಿಗರನ್ನು ಸೆಳೆಯಬಲ್ಲ ಫ್ಯಾಕ್ಟರ್ ಆಗಿ ಕಿಚ್ಚ ಸುದೀಪ್ ಇದ್ದಾನೆ. ಶ್ರುತಿ ಹಾಸನ್, ಹನ್ಸಿಕಾ ಇದ್ದಾರೆ.
ಬಾಹುಬಲಿಗೆ ಸರಿಗಟ್ಟಬಲ್ಲ ವಿಎಫ್ಎಕ್ಸ್ ಕೈಚಳಕವನ್ನು ನಿರ್ಮಾಪಕರು ಮಾಡಿಸಿದ್ದಾರೆ. ಯುಟ್ಯೂಬ್‍ನಲ್ಲಿ ಇದನ್ನು ನೋಡಿದವರ ಸಂಖ್ಯೆಯೇ ಆರು ಲಕ್ಷ ಎಂಬುದನ್ನು ಮರೆಯಕೂಡದು. ಲೈಕ್ ಒತ್ತಿದವರು ಹತ್ತು ಲಕ್ಷ. ಥಿಯೇಟರಿಗೂ ಇಷ್ಟು ಜನ ಬಂದರೆ ಅದು ಇನ್ನೊಂದು ದಾಖಲೆ ಸೃಷ್ಟಿಸುತ್ತದೆ. ಅಂತೂ ತಮಿಳು, ತೆಲುಗು ಚಿತ್ರಗಳೇ ಈ ವಿಚಾರದಲ್ಲಿ ಹಿಂದಿಗಿಂತ ಮುಂದಿವೆ.