

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ರಷ್ಯಾ ದೇಶವು ಇರಾನ್ ರಾಷ್ಟ್ರದೊಂದಿಕೆ ಅಮೆರಿಕದ ಸೇನಾ ತಾಣಗಳ ಕುರಿತು ಗೌಪ್ಯ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಇದು ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಈ ಬಗ್ಗೆ ಮಾತನಾಡಿ, ಪರಿಸ್ಥಿತಿಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, “ಯಾರು ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದೆ. ಅದರ ಬಗ್ಗೆ ನಮಗೆ ಚಿಂತೆಯಿಲ್ಲ. ಅಗತ್ಯವಿದ್ದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಅಮೆರಿಕದ ಸೇನೆ ಪರಿಸ್ಥಿತಿಯನ್ನು ಸಮೀಪದಿಂದ ಗಮನಿಸುತ್ತಿದ್ದು, ಅಗತ್ಯವಾದರೆ ತಕ್ಷಣ ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಮಗೆ ವಿಶ್ವದಲ್ಲೇ ಅತ್ಯುತ್ತಮ ಗುಪ್ತಚರ ವ್ಯವಸ್ಥೆ ಇದೆ. ಯಾರ್ಯಾರು ಯಾರ ಜೊತೆ ಮಾತನಾಡುತ್ತಿದ್ದಾರೆ ಎಂಬುದರ ಮಾಹಿತಿ ನಮಗೆ ಇದೆ ಎಂದು ಹೇಳಿದ್ದಾರೆ.
ಅಮೆರಿಕದ ಗುಪ್ತಚರ ಮೂಲಗಳ ಪ್ರಕಾರ, ರಷ್ಯಾ ಇರಾನ್‌ಗೆ ಅಮೆರಿಕದ ಯುದ್ಧನೌಕೆಗಳು, ಯುದ್ಧವಿಮಾನಗಳು ಹಾಗೂ ಸೇನಾ ತಾಣಗಳ ಬಗ್ಗೆ ಮಾಹಿತಿ ನೀಡಿರಬಹುದು ಎಂದು ಹೇಳಲಾಗುತ್ತಿದೆ.
ಈ ಮಾಹಿತಿಯಿಂದ ಇರಾನ್ ಅಮೆರಿಕದ ಸೇನಾ ಸಂಪತ್ತನ್ನು ಗುರಿಯಾಗಿಸಿ ದಾಳಿ ನಡೆಸಲು ಸಾಧ್ಯವಾಗಬಹುದು ಎಂದು ಹೇಳಲಾಗಿದೆ.
ಆದರೆ ರಷ್ಯಾ ನೇರವಾಗಿ ದಾಳಿಗೆ ಮಾರ್ಗದರ್ಶನ ನೀಡುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯ ಇನ್ನೂ ಲಭ್ಯವಾಗಿಲ್ಲ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಯುದ್ಧ ಪರಿಸ್ಥಿತಿಯ ನಡುವೆ ಬೆಳಕಿಗೆ ಬಂದಿದೆ. ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಸೈನಿಕ ಕಾರ್ಯಾಚರಣೆಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಮತ್ತು ಅದರ ಬೆಂಬಲಿತ ಗುಂಪುಗಳು ಹಲವು ದಾಳಿಗಳನ್ನು ನಡೆಸುತ್ತಿರುವುದರಿಂದ ಉದ್ವಿಗ್ನತೆ ಹೆಚ್ಚಾಗಿದೆ.
ಇದಕ್ಕೂ ಮುನ್ನ ಇರಾನ್ ರಷ್ಯಾಗೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಒದಗಿಸಿರುವ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವಿನ ಸೇನಾ ಸಹಕಾರ ಇತ್ತೀಚೆಗೆ ಇನ್ನಷ್ಟು ಗಟ್ಟಿಯಾಗುತ್ತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ
Advertisement