ಅಮೆರಿಕಕ್ಕೆ ಬಿಗ್ ಶಾಕ್; ಪರಮಾಣು ಸ್ಥಾವರಗಳ ಮೇಲಿನ ದಾಳಿಗೆ ಖಂಡನೆ, ಇರಾನ್ ಪರ ನಿಂತ ರಷ್ಯಾ; ಯುದ್ಧ ನಿಲ್ಲಿಸಲು ಸರ್ವಪ್ರಯತ್ನ ಎಂದ ಪುಟಿನ್..!

ಪ್ರಾದೇಶಿಕವಾಗಿ ಎದುರಾಗಿರುವ ಪ್ರಮುಖ ವಿಚಾರಗಳು, ಯುದ್ಧದ ನಂತರದ ಪರಿಸ್ಥಿತಿ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಪುಟಿನ್ ಅವರೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಾಗಿದೆ.
Trump- Putin
ಡೊನಾಲ್ಡ್ ಟ್ರಂಪ್, ಪುಟಿನ್
Updated on: 

ಮಾಸ್ಕೋ: ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷವನ್ನು ಕೊನೆಗೊಳಿಸಲು ಮಾಸ್ಕೋ ತನ್ನೆಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭರವಸೆ ನೀಡಿದ್ದಾರೆ.

ಇರಾನ್‌ನ ಪರಮಾಣು ಮೂಲಸೌಕರ್ಯಗಳ ಮೇಲಿನ ವೈಮಾನಿಕ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅವರು, ಇದನ್ನು ಒಂದು "ಅನ್ಯಾಯದ ಯುದ್ಧ" ಎಂದು ಕರೆದಿದ್ದಾರೆ.

ಗುರುವಾರ ಕ್ರೆಮ್ಲಿನ್‌ನಲ್ಲಿ ರಷ್ಯಾ ಅಧ್ಯಕ್ಷರನ್ನು ಭೇಟಿಯಾದ ಇರಾನ್‌ನ ಭದ್ರತಾ ಮುಖ್ಯಸ್ಥ ಮೊಹ್ಸೆನ್ ರೆಜಾಯೀ ಈ ವಿಷಯ ತಿಳಿಸಿದ್ದಾರೆ.

ಅಮೆರಿಕದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ನೆರವಾಗಲು ಸಾಧ್ಯವಿರುವ ಎಲ್ಲವನ್ನೂ ಮಾಡುವುದಾಗಿ ಪುಟಿನ್ ಹೇಳಿದ್ದಾರೆ ಎಂದು ಇರಾನ್‌ನ ಸರ್ಕಾರಿ ಪ್ರಸಾರ ಮಾಧ್ಯಮ ಪ್ರೆಸ್ ಟಿವಿ ವರದಿ ಮಾಡಿದೆ.

ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಮೊಜ್ತಬಾ ಖಮೇನಿ ಅವರ ಸಂದೇಶವನ್ನೂ ರೆಜಾಯೀ ಪುಟಿನ್ ಅವರಿಗೆ ತಲುಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಷ್ಯಾ ಅಧ್ಯಕ್ಷರು ಇರಾನ್ ನಾಯಕನಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ಕಳುಹಿಸಿದ್ದಾರೆ.

ಸಭೆಯ ಬಳಿಕ ಮಾತನಾಡಿದ ರೆಜಾಯೀ, ಉಭಯ ದೇಶಗಳ ನಾಯಕರು ಪ್ರಾದೇಶಿಕ ಬೆಳವಣಿಗೆಗಳು, ಯುದ್ಧಾನಂತರದ ವ್ಯವಸ್ಥೆಗಳು ಹಾಗೂ ಭವಿಷ್ಯದ ಭದ್ರತಾ ಯೋಜನೆಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿಸಿದರು.

ಪ್ರಾದೇಶಿಕವಾಗಿ ಎದುರಾಗಿರುವ ಪ್ರಮುಖ ವಿಚಾರಗಳು, ಯುದ್ಧದ ನಂತರದ ಪರಿಸ್ಥಿತಿ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಪುಟಿನ್ ಅವರೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.

Trump- Putin
'ನಿಜ': ಮಧ್ಯಂತರ ಚುನಾವಣೆ ಮೇಲೆ ಇರಾನ್ ಯುದ್ಧ ಪರಿಣಾಮ ಬೀರಿದೆ, ಆದರೆ ಅನಿವಾರ್ಯವಾಗಿತ್ತು'- ಡೊನಾಲ್ಡ್ ಟ್ರಂಪ್

ಇದೇ ವೇಳೆ ಇಂಧನ ಸಹಕಾರದ ಬಗ್ಗೆಯೂ ಚರ್ಚೆ ನಡೆದಿದೆ. ಮುಖ್ಯವಾಗಿ ರಷ್ಯಾ ಮತ್ತು ಇರಾನ್ ನಡುವೆ ಅನಿಲ ಕೊಳವೆ ಮಾರ್ಗ ನಿರ್ಮಿಸುವ ಪ್ರಸ್ತಾವನೆ ಸಭೆಯಲ್ಲಿ ಪ್ರಸ್ತಾಪವಾಗಿದೆ. ಈ ಯೋಜನೆಯಿಂದ ಇರಾನ್‌ನಲ್ಲಿನ ಆಂತರಿಕ ಅನಿಲ ಕೊರತೆಯನ್ನು ನೀಗಿಸುವುದರ ಜೊತೆಗೆ, ನೆರೆಯ ರಾಷ್ಟ್ರಗಳಿಗೆ ಅನಿಲ ಪೂರೈಸಲು ರಷ್ಯಾಕ್ಕೂ ನೆರವಾಗಲಿದೆ ಎಂದು ತಿಳಿಸಿದರು.

ಮಾತುಕತೆಗೆ ಅಮೆರಿಕಾಗೆ ಇರಾನ್‌ 7 ಷರತ್ತು

ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಸಂಘರ್ಷವನ್ನು ಅಂತ್ಯಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವ ಬೆನ್ನಲ್ಲೇ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಹಾರ್ಮುಜ್ ಜಲಸಂಧಿಯ ಭವಿಷ್ಯದ ಸ್ಥಿತಿ, ಇರಾನ್ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನ, ನಿರ್ಬಂಧಗಳು ಹಾಗೂ ಇರಾನ್‌ನ ಪರಮಾಣು ಕಾರ್ಯಕ್ರಮ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಯುತ್ತಿದೆ. ಆದರೆ, ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ ಎಂಬ ಸುಳಿವನ್ನು ಇರಾನ್ ನೀಡಿದೆ.

ಅಮೆರಿಕದ ಮುಂದೆ ಇರಾನ್ ಈಗಾಗಲೇ ಏಳು ಷರತ್ತುಗಳನ್ನು ಮುಂದಿಟ್ಟಿದೆ. ವಾಷಿಂಗ್ಟನ್ ಈ ಷರತ್ತುಗಳನ್ನು ಈಡೇರಿಸುವವರೆಗೂ ಹಾರ್ಮುಜ್ ಜಲಸಂಧಿಯನ್ನು ತೆರೆಯುವುದಿಲ್ಲ ಅಥವಾ ಮಾತುಕತೆಯನ್ನು ಪುನರಾರಂಭಿಸುವುದಿಲ್ಲ ಎಂದು ಪುಟಿನ್ ಅವರಿಗೆ ತಿಳಿಸಿರುವುದಾಗಿ ರೆಜಾಯೀ ಹೇಳಿದ್ದಾರೆ.

ನಾವು ರಾಜತಾಂತ್ರಿಕತೆಯ ವಿಚಾರದಲ್ಲಿ ಅಮೆರಿಕದ ಮುಂದೆ ಏಳು ಷರತ್ತುಗಳನ್ನು ಇಟ್ಟಿದ್ದೇವೆ. ಅವುಗಳನ್ನು ಈಡೇರಿಸುವವರೆಗೂ ಹಾರ್ಮುಜ್ ಜಲಸಂಧಿಯನ್ನು ತೆರೆಯುವುದಿಲ್ಲ ಮತ್ತು ಮಾತುಕತೆಯನ್ನೂ ನಡೆಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಇರಾನ್ ಯಾವುದೇ ಕಾರಣಕ್ಕೂ ಅಮೆರಿಕದ ಮುಂದೆ ಶರಣಾಗುವ ಮನೋಭಾವ ತೋರಬಾರದು ಎಂದು ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಬುಧವಾರ ಬಿಡುಗಡೆ ಮಾಡಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಮೆರಿಕಕ್ಕೆ ಶರಣಾಗುವ ಸಣ್ಣ ಸುಳಿವನ್ನೂ ಇರಾನ್ ನೀಡಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X