ಸ್ಯಾಂಡಲ್‍ವುಡ್‍ನ ಬ್ಯುಸಿ ನಟಿ ಶ್ರುತಿ ಹರಿಹರನ್ ಬಾಲಿವುಡ್‍ಗೆ ಹೋಗ್ತಿದ್ದಾರಾ? ಹೀಗೊಂದು ಸುಳಿವು ನೀಡಿದ್ದಾರೆ ಶ್ರುತಿ. ಈಗವರು ಹಿಂದಿಯ ಕಿರುಚಿತ್ರವೊಂದರಲ್ಲಿ ನಟಿಸಿದ್ದಾರೆ.
'ಲೂಸಿಯಾ'ದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿಯಾದ ನೀಳಕಾಯದ ಸುಂದರಿ ಶ್ರುತಿ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದರೂ ಕಿರುಚಿತ್ರದ ಅವರ ಕುತೂಹಲಕ್ಕೆ ಹೆಮ್ಮೆಪಡಲೇಬೇಕು. ಸಾಮಾನ್ಯವಾಗಿ ಅತ್ಯುನ್ನತ ಫಾರ್ಮ್ ನಲ್ಲಿರುವ ಯಾವುದೇ ನಟಿಯರು ಕಿರುಚಿತ್ರಗಳಲ್ಲಿ ನಟಿಸಲು ಒಪೋದಿಲ್ಲ. ಆದರೆ ಶ್ರುತಿ ಹರಿಹರನ್ ಈ ವಿಚಾರದಲ್ಲಿ ತುಂಬಾ ಭಿನ್ನ. ಮದನ್ ರಾಮ್ ವೆಂಕಟೇಶ್ ನಿರ್ದೇಶನದ 'ಎಬಿಸಿ' ಕಿರುಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕಥೆಯೇ ನನ್ನನ್ನು ನಟಿಸಲು ಒಪ್ಪಿಸಿತು ಎನ್ನುತ್ತಾರೆ ಶ್ರುತಿ.
ಹಾಗಾದ್ರೆ, ಈ ಚಿತ್ರಕಥೆಯ ವಿಶೇಷ ಏನು? 'ಇಂದು ಎಲ್ಲರೂ ಸಂಕೀರ್ಣ ಸಮಸ್ಯೆಯ ಸುಳಿಗೆ ಸಿಲುಕುತ್ತಿದ್ದಾರೆ. ಇಂಥದ್ದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ಕಥಾ ನಾಯಕಿಗೆ, ಆಕಸ್ಮಿಕವಾಗಿ ಪರಿಚಯವಾದ ಚಿಕ್ಕ ವಯಸ್ಸಿನ ಯುವಕನೊಬ್ಬ ತನ್ನ ಜಾಣ್ಮೆಯಿಂದ ಆಕೆಯ ಸ್ನೇಹ ಸಂಪಾದಿಸಿ, ಸಮಸ್ಯೆಯಿಂದ ಪಾರು ಮಾಡುತ್ತಾನಂತೆ. ಇದು ಈ ಕಾಲದ ರಿಯಾಲಿಟಿ. ಈ ಕಥೆ ಪ್ರತಿಯೊಬ್ಬರನ್ನೂ ತಲುಪುತ್ತದೆ' ಅಂತಾರೆ ನಿರ್ದೇಶಕ ಮದನ್‍ರಾಮ್ ವೆಂಕಟೇಶ್. ಈ ಕಥೆಗೆ ಶ್ರುತಿ ಹರಿಹರನ್ ಆಯ್ಕೆಯಾಗಿದ್ದೂ ಕೌತುಕವೇ.
ಏಕೆಂದರೆ, ನಿರ್ದೇಶಕರ ಹುಡುಕಾಟದಲ್ಲಿ ಇವರು ಹೆಚ್ಚೂಕಮ್ಮಿ 9ನೇ ನಾಯಕಿಯಂತೆ! 'ರಾಧಿಕಾ ಪಂಡಿತ್, ಸಂಜನಾ ಸೇರಿದಂತೆ ಹಲವರನ್ನು ಸಂಪರ್ಕಿಸಿದ್ದೆವು. ಆದರೆ, ತಮ್ಮ ಬ್ಯುಸಿ ಶೆಡ್ಯೂಲ್ ಕಾರಣಕ್ಕೆ ಅವರ್ಯಾರೂ ಒಪ್ಪಿಕೊಳ್ಳಲಿಲ್ಲ. ಕೊನೆಗೊಂದು ದಿನ ಶ್ರುತಿ ಹರಿಹರನ್ ಅವರನ್ನು ಭೇಟಿಯಾಗಿ ಕಥೆ ಹೇಳಿದೆವು. ಇದು ನನ್ನದೇ ಕಥೆ. ಅಭಿನಯಿಸಲು ತಾನು ಸಿದ್ಧ ಎಂದೇ ಬಿಟ್ಟರು' ಎನ್ನುತ್ತಾರೆ ಮದನ್. ಸುಮಾರು 14 ನಿಮಿಷಗಳ ಚಿತ್ರವಿದು. ಯುವತಿ ಮತ್ತು ಬಾಲಕ ಈ ಕಥೆಯ ಕೇಂದ್ರಬಿಂದು. ಎಡಿಜಿಪಿ ಸಲೀಂ ಪುತ್ರ ಮಾಸ್ಟರ್ ಶಾ ಬಾಜ್ ಸಲೀಂ ಅವರನ್ನು ಬಾಲಕನ ಪಾತ್ರದಲ್ಲಿ ಪರಿಚಯಿಸಲಾಗಿದೆ.
ಬೆಂಗಳೂರಿನ ಬನಶಂಕರಿ ಹಾಗೂ ಎಂ.ಜಿ. ರಸ್ತೆಯಲ್ಲಿ ಶೂಟಿಂಗ್ ನಡೆದಿದೆ. ಉದ್ಯಮಿ ಬಾಬು ಶಾ ಹಾಗೂ ಸಾಜನ್ ಬಂಡವಾಳ ಹಾಕಿದ್ದಾರೆ. ಸದ್ಯ ಈ ಚಿತ್ರ ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿದೆ. ಇದು ಮುಗಿದ ತಕ್ಷಣ ಪ್ರೇಕ್ಷಕರ ಮಟ್ಟಕ್ಕೂ ಚಿತ್ರವನ್ನು ತೆಗೆದುಕೊಂಡು ಹೋಗಲು ಚಿತ್ರ ತಂಡ ಪ್ಲಾನ್ ಮಾಡಿದೆ. ಇನ್ನು ತಮಿಳಿನಲ್ಲಿ ಸಿಗುತ್ತಿರುವ ಸಾಕಷ್ಟು ಅವಕಾಶಗಳ ನಡುವೆಯೇ ಸ್ಯಾಂಡಲ್‍ವುಡ್‍ನಲ್ಲಿ `ಪ್ಲಸ್' ಚಿತ್ರದ ನಂತರ `ಮಾರುತಿ 800' ಹಾಗೂ `ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರಗಳ ಚಿತ್ರೀಕರಣದಲ್ಲಿ ಶ್ರುತಿ ಬ್ಯುಸಿಯಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos