ಲಾಸೇಂಜಲಿಸ್: ನಾಲ್ಕು ಪ್ರಮುಖ ಜೇಮ್ಸ್ ಬಾಂಡ್ ಸಿನೆಮಾಗಳನ್ನು ನಿರ್ದೇಶಿಸಿದ್ದ ಬ್ರಿಟಿಶ್ ನಿರ್ದೇಶಕ ಗಯ್ ಹ್ಯಾಮಿಲ್ಟನ್ ಅಸು ನೀಗಿದ್ದಾರೆ. ಅವರಿಗೆ ೯೩ ವರ್ಷಗಳಾಗಿತ್ತು.
ಈ ನಿರ್ದೇಶಕ ಸೀನ್ ಕಾನೆರಿ ಬಾಂಡ್ ಪಾತ್ರದಲ್ಲಿ ನಟಿಸಿದ್ದ 'ಗೋಲ್ಡ್ ಫಿಂಗರ್', "ಡೈಮಂಡ್ಸ್ ಆರ್ ಫಾರೆವರ್' ಮತ್ತು ರೋಜರ್ ಮೂರ್ ಬಾಂಡ್ ಪಾತ್ರದಲ್ಲಿ ನಟಿಸಿದ್ದ 'ಲಿವ್ ಅಂಡ್ ಲೆಟ್ ಡೈ' ಮತ್ತು 'ದ ಮ್ಯಾನ್ ವಿತ್ ದ ಗೋಲ್ಡನ್ ಗನ್' ಸಿನೆಮಾಗಳನ್ನು ನಿರ್ದೇಶಿಸಿದ್ದರು.
ಸ್ಪೇನ್ ನ ಮಲ್ಲೋರ್ಕಾ ಆಸ್ಪತ್ರೆಯಲ್ಲಿ ಹ್ಯಾಮಿಲ್ಟನ್ ಅಸು ನೀಗಿದ್ದಾರೆ ಎಂದು ವರದಿಯಾಗಿದೆ.
"ಬಹಳ ದುಃಖವಾಗಿದೆ" ಎಂದು ಮೂರ್ ಟ್ವಿಟ್ಟರ್ ನಲ್ಲಿ ಗೌರವ ಸಲ್ಲಿಸಿರುವುದಾಗಿ ದ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
೫೦ ರ ದಶಕದಿಂದ ೮೦ ರ ದಶಕದವರೆಗೆ ಇನ್ನೂ ಹಲವಾರು ಚಿತ್ರಗಳನ್ನು ಹ್ಯಾಮಿಲ್ಟನ್ ನಿರ್ದೇಶಿಸಿದ್ದರು. ಮೈಕೆಲ್ ಕ್ಯಾನ್ ಅವರ 'ಬ್ಯಾಟಲ್ ಆಫ್ ಬ್ರಿಟನ್' ಮತ್ತು ಹ್ಯಾರಿ ಪಾಮರ್ ಅವರ ತ್ರಿಲ್ಲರ್ ಸಿನೆಮಾ 'ಫ್ಯೂನೆರಲ್ ಇನ್ ಬರ್ಲಿನ್' ಕೂಡ ನಿರ್ದೇಶಿಸಿದ್ದರು.
ಅಲ್ಲದೆ ಖ್ಯಾತ ಲೇಖಕಿ ಅಗಾತ ಕ್ರಿಸ್ಟಿ ಕಾದಂಬರಿಗಳನ್ನು ಸಿನೆಮಾಗೆ ಅಳವಡಿಸಿ ಏಂಜೆಲಾ ಲ್ಯಾನ್ಸ್ಬರಿ ಜೊತೆಗೆ 'ದ ಮಿರರ್ ಕ್ರಾಕಡ್' ಮತ್ತು ಪೀಟರ್ ಉಸ್ತಿನಾವ್ ಪಾಯ್ರಟ್ ಆಗಿ ನಟಿಸಿದ್ದ 'ಈವಿಲ್ ಅಂಡರ್ ಸನ್' ಕೂಡ ನಿರ್ದೇಶಿಸಿದ್ದರು.