ನಾನಾ ಪಾಟೇಕರ್ -ಪ್ರತ್ಯೂಷ ಬ್ಯಾನರ್ಜಿ
ಮುಂಬೈ: ಆ ಹುಡುಗಿ (ಪ್ರತ್ಯೂಷ ಬ್ಯಾನರ್ಜಿ) ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ. ಆದರೆ ಈ ಮಾಧ್ಯಮಗಳು ಯಾಕೆ ಪ್ರತಿ ದಿನ ಅದೇ ಸುದ್ದಿಯನ್ನು ಹೈಲೈಟ್ ಮಾಡಿ ತೋರಿಸುತ್ತಲೇ ಇರುತ್ತವೆ? ಇಲ್ಲಿ ರೈತ ಆತ್ಮಹತ್ಯೆ ಮಾಡುತ್ತಿದ್ದರೆ ಆ ಬಗ್ಗೆ ಯಾಕೆ ಗಮನ ಹರಿಸುವುದಿಲ್ಲ? ಅವರ ಬದುಕಿಗೆ ಬೆಲೆ ಇಲ್ಲವೆ? ಹೀಗಂತ ಪ್ರಶ್ನಿಸಿದ್ದು ಬೇರೆ ಯಾರೂ ಅಲ್ಲ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ .
ನಾನಾ ಪಾಟೇಕರ್ ಮಹರಾಷ್ಟ್ರದಲ್ಲಿ ಬರ ಪೀಡಿತ ಪ್ರದೇಶದ ರೈತರಿಗೆ ಸಹಾಯ ಮಾಡುತ್ತಲೇ ಇರುತ್ತಾರೆ. ನಾನಾ ಪಾಟೇಕರ್ ಮತ್ತು ಮರಾಠಿ ನಟ ಮಾರ್ಕಂಡ್ ಅನಾಸ್ಪುರೆ ಜತೆಗೂಡಿ ಆರಂಭಿಸಿ ನಾಮ್ ಫೌಂಡೇಷನ್ ಬರಪೀಡಿತ ಪ್ರದೇಶದ ರೈತರಿಗೆ ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಾರೆ.
ಮಳೆ ಕೈ ಕೊಟ್ಟ ಕಾರಣ ಮಹಾರಾಷ್ಟ್ರದ ಮರಾಠವಾಡ ಮತ್ತು ವಿದರ್ಭ ಜಿಲ್ಲೆಗಳು ಬರ ಪೀಡಿತವಾಗಿವೆ. ಇಲ್ಲಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ರೈತರ ಆತ್ಮಹತ್ಯೆಯ ಬಗ್ಗೆ ಸುದ್ದಿಯೊಂದು ಪ್ರಕಟವಾಗುವುದು ಬಿಟ್ಟರೆ, ರೈತರ ಬವಣೆ ಬಗ್ಗೆ ಮಾಧ್ಯಮಗಳು ತಲೆ ಕೆಡಿಸಿಕೊಂಡಿಲ್ಲ.
ಸರ್ಕಾರೇತರ ಸಂಸ್ಥೆಯ ಜತೆ ಸೇರಿ ಬರ ಪೀಡಿತ ಪ್ರದೇಶಗಳಿಗೆ ನಾನಾ ಸಹಾಯ ಹಸ್ತ ನೀಡುತ್ತಿದ್ದಾರೆ. ಇವರ ಈ ಎನ್‌ಜಿಒಗೆ ಕಳೆದ ಎರಡು ವಾರಗಳಲ್ಲಿ ರು. 6 ಕೋಟಿ ದೇಣಿಗೆ ಬಂದಿತ್ತು.
ನಾನಾ ಪಾಟೇಕರ್ ಅವರಂತೆಯೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಅಮೀರ್ ಖಾನ್ ಕೂಡಾ ರೈತರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ.
ಅಮೀರ್ ಖಾನ್ ಎರಡು ಜಿಲ್ಲೆಗಳನ್ನು ದತ್ತು ಪಡೆದರೆ, ಅಕ್ಷಯ್ ಕುಮಾರ್ ರು. 50 ಲಕ್ಷ ಸಹಾಯ ಧನವನ್ನು ನೀಡಿದ್ದಾರೆ.