ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅವರ ಬಹು ನಿರೀಕ್ಷಿತ 150 ನೇ ಚಿತ್ರ ಶುಕ್ರವಾರ ಸೆಟ್ಟೇರಲಿದೆ ಎಂದು ಚಿರಂಜೀವಿ ಅಪ್ತರೊಬ್ಬರು ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ಹಲವು ಕಾರಣಗಳಿಂದ ವಿಳಂಬವಾಗುತ್ತಿದ್ದ ಚಿರಂಜೀವಿ ಸಿನಿಮಾಗೆ ಶುಕ್ರವಾರ ಮಧ್ಯಾಹ್ನ 1.30 ಕ್ಕೆ ಮೂಹೂರ್ತ ಆರಂಭವಾಗಲಿದೆ.
ಇನ್ನೂ ಹೆಸರಿಡದ ಈ ಚಿತ್ರವನ್ನು ವಿವಿ ವಿನಾಯಕ್ ನಿರ್ದೇಶನ ಮಾಡಲಿದ್ದಾರೆ. ಜೂನ್ 1 ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು ನಾಯಕಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ.
ಎಲ್ ವೈಸಿಎ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚಿರಂಜೀವಿ ಪುತ್ರ ರಾಮ್ ಚರಣ್ ಸಹ ನಿರ್ಮಾಪಕರಾಗಿದ್ದಾರೆ. ಚಿರಂಜೀವಿ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದು, ಈಗಾಗಲೇ ವರ್ಕೌಟ್ ಶುರು ಮಾಡಿದ್ದಾರೆ ಎನ್ನಲಾಗಿದೆ.
ತಮಿಳಿನ ಕತ್ತಿ ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡಲಾಗುತ್ತಿದ್ದು ಇಲ್ಲಿನ ನೆಟಿವಿಟಿಗೆ ತಕ್ಕಂತೆ ಹಲವು ಪಾತ್ರ ಹಾಗೂ ಸನ್ನಿವೇಶಗಳನ್ನು ಬದಲಾಯಿಸಿಕೊಳ್ಳಲಾಗುವುದು ಎಂದು ಚಿತ್ರ ತಂಡ ಹೇಳಿದೆ.