ಬೆಂಗಳೂರು: ಪ್ರೇಮ್ ನಿರ್ದೇಶನದ, ಸಿ ಆರ್ ಮನೋಹರ್ ನಿರ್ಮಾಣದ ಮುಂದಿನ ಚಿತ್ರ 'ದ ವಿಲನ್' ಗೆ ಆಗಸ್ಟ್12 ರಿಂದ ಚಾಲನೆ ಸಿಗಲಿದೆ.
ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿರುವ ಈ ಸಿನೆಮಾಗೆ ನಿರ್ಮಾಪಕರು ದಕ್ಷಿಣ ಭಾರತ ಮತ್ತು ಬಾಲಿವುಡ್ ನಟಿ ತಮನ್ನ ಭಾಟಿಯಾ ಅವರನ್ನು ಕೇಳಿದ್ದಾರಂತೆ. ಅವರು ಒಪ್ಪಿಕೊಂಡರೆ ಕನ್ನಡ, ತೆಲುಗು ಮತ್ತು ತಮಿಳು ಮೂರೂ ಭಾಷೆಗಳಲ್ಲಿ ಅವರು ನಾಯಕ ನಟಿಯಾಗಲಿದ್ದಾರೆ.
ಅವರ ಸದ್ಯದ ಯೋಜನೆಗಳಿಗೆ ತೊಂದರೆಯಾಗದಂತೆ ಚಿತ್ರೀಕರಣದ ದಿನಾಂಕಗಳು ದೊರೆತರೆ ಈ ಸಿನೆಮಾದಲ್ಲಿ ನಟಿಸಲು ತಮನ್ನ ಆಸಕ್ತಿ ತೋರಿದ್ದಾರಂತೆ. ತೆಲುಗು ಮತ್ತು ತಮಿಳು ಸಿನೆಮಾಗಳಲ್ಲಿ ಈಗಾಗಲೇ ತಮನ್ನ ನಟಿಸಿದ್ದರು, ಇದು ಅವರ ಮೊದಲ ಕನ್ನಡ ಸಿನೆಮಾ ಆಗಲಿದೆ. ಈ ಹಿಂದೆ ಕೆಲವು ನಿರ್ಮಾಪಕರು ತಮನ್ನ ಅವರನ್ನು ಕನ್ನಡ ಚಿತ್ರರಂಗಕ್ಕೆ ತರಲು ಪ್ರಯತ್ನಿಸಿ ಸೋತಿದ್ದರು. ಹಲವಾರು ಬಾಲಿವುಡ್ ತಾರೆಗಳನ್ನು ಕನ್ನಡಕ್ಕೆ ಕರೆತಂದಿರುವ ಖ್ಯಾತಿ ಹೊಂದಿರುವ ಪ್ರೇಮ್ ಈ ಯೋಜನೆಯಲ್ಲಿಯೂ ಯಶಸ್ಸು ಕಾಣಲಿದ್ದಾರೆಯೇ ಎಂದು ಕಾದು ನೋಡಬೇಕು.
ಸದ್ಯಕ್ಕೆ ನಟಿ ವಿಜಯ್ ಸೇತುಪತಿ ಅವರೊಂದಿಗೆ 'ಧರ್ಮ ದೊರೈ' ಸಿನೆಮಾ ಮುಗಿಸಿದ್ದು, ಬಾಹುಬಲಿ ಎರಡನೇ ಭಾಗದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಇನ್ನು ಹಲವಾರು ಯೋಜನೆಗಳಿಗೆ ತಮನ್ನ ಸಹಿ ಮಾಡಿದ್ದಾರೆ.
ಸದ್ಯಕ್ಕೆ ಶಿವರಾಜ್ ಕುಮಾರ್ ಅವರು 'ಶ್ರೀಕಂಠ' ಮತ್ತು 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸುದೀಪ್ ಅವರ 'ಕೋಟಿಗೊಬ್ಬ2' ಆಗಸ್ಟ್ 12 ಕ್ಕೆ ಬಿಡುಗಡೆಯಾಗಲಿದ್ದು, 'ಹೆಬ್ಬುಲಿ' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.