ದಕ್ಷಿಣ ಭಾರತದ ಖ್ಯಾತ ತಾರೆಯರಾದ ರೇವತಿ ಮತ್ತು ಸುಹಾಸಿನಿ
ಬೆಂಗಳೂರು: ಬಾಲಿವುಡ್ ಸೂಪರ್ ಸ್ಟಾರ್ ಕಂಗನಾ ರಣಾವತ್ ಅವರ 'ಕ್ವೀನ್' ಸಿನೆಮಾದ ರಿಮೇಕ್ ಹಕ್ಕುಗಳನ್ನು ಖರೀದಿಸಿರುವ ನಿರ್ಮಾಪಕ ತ್ಯಾಗರಾಜನ್, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಸಿನೆಮಾ ನಿರ್ಮಿಸಲು ಮುಂದಾಗಿದ್ದಾರೆ. ಸಿನೆಮಾ ನಿರ್ದೇಶಿಸಲು ದಕ್ಷಿಣ ಭಾರತದ ಖ್ಯಾತ ತಾರೆಯರಾದ ಸುಹಾಸಿನಿ ಮತ್ತು ರೇವತಿ ಅವರನ್ನು ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕ, ತಮಿಳು ನಾಡು, ಆಂಧ್ರ-ತೆಲಂಗಾಣ ಮತ್ತು ಕೇರಳದ ಸಾಂಸ್ಕೃತಿಕ ಚಹರೆಯನ್ನು ಸಿನೆಮಾದಲ್ಲಿ ಮೂಡಿಸಲು ಇಬ್ಬರೂ ಉತ್ಸುಕರಾಗಿದ್ದಾರೆ.
"ಪ್ರಶಾಂತ್ ಅವರ ತಂದೆ ತ್ಯಾಗರಾಜನ್ ನಮ್ಮ ಹಳೆಯ ಸಹೋದ್ಯೋಗಿ. ಅವರಿಗೆ ಈ ಸಿನೆಮಾ ನಾವು ನಿರ್ದೇಶಿಸಬೇಕೆಂಬ ಆಸೆಯಿತ್ತು. ನಾನು 'ಕ್ವೀನ್'ನ ತಮಿಳು ಅವತರಿಣಿಕೆಯನ್ನು ಬರೆದಿದ್ದೇನೆ. ರೇವತಿ ಮತ್ತು ನನ್ನ ಗೆಳತಿ ಕವಯತ್ರಿ ಮಮತಾ ಸಾಗರ್ ಅವರಿಗೆ ಕನ್ನಡ ಅವತರಿಣಿಕೆಯ ಸ್ಕ್ರಿಪ್ಟ್ ಬರೆಯಲು ಕೇಳಿಕೊಂಡಿದ್ದೇವೆ" ಎನ್ನುತ್ತಾರೆ ಸುಹಾಸಿನಿ.
"ನಾವು 'ಕ್ವೀನ್' ಸಿನೆಮಾವನ್ನು ದಕ್ಷಿಣ ಭಾರತಕ್ಕೆ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಚರ್ಚಿಸಿದ್ದೇವೆ. ನಾನು ನಂಬಿರುವಂತೆ ದಕ್ಷಿಣ ಭಾರತದ ಮಹಿಳೆಯರು ಉತ್ತರ ಭಾರತದ ಮಹಿಳೆಯರಿಗಿಂತಲೂ ಸ್ವತಂತ್ರವಾಗಿರುತ್ತಾರೆ. ಉತ್ತರ ಭಾರತದಲ್ಲಿ ಮಹಿಳೆಯರು ಇಂದಿಗೂ ತಲೆಯ ಮೇಲೆ ಸೆರಗು ಹೊದ್ದು, ಹಿರಿಯ ಕಾಲು ಮುಟ್ಟಿ ನಮಸ್ಕರಿಸುವುದು ವಾಡಿಕೆ. ಮತ್ತು ಇಲ್ಲಿ ಹೆಣ್ಣು ಮಗು ಜನಿಸಿದಾಗ ಹೊರೆ ಎನ್ನುವ ನಂಬಿಕೆ ಅಳಿದಿದೆ" ಎನ್ನುವ ಸುಹಾಸಿನಿ ಮಣಿರತ್ನಂ, ನಾಲ್ಕು ಭಾಷೆಗಳಲ್ಲಿ ಚಿತ್ರಣವಾಗುವ ಸಿನೆಮಾ ಆಯಾ ಪ್ರದೇಶಗಳ ಸಂಸ್ಕೃತಿಯನ್ನು ಹಿಡಿದಿಡಲಿದೆ ಎಂದಿದ್ದಾರೆ.
ತಮಿಳು ಅವತರಿಣಿಕೆ ಕಡೂರಿನಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ ಎಂದು ತಿಳಿದು ಬಂದಿದ್ದು "ಸಿನೆಮಾ ಯಾವಾಗ ಚಿತ್ರೀಕರಣ ಪ್ರಾರಂಭಿಸಲಿದೆ ಎಂದು ರೇವತಿ ನಿರ್ಧರಿಸಲಿದ್ದಾರೆ" ಎನ್ನುತ್ತಾರೆ ಸುಹಾಸಿನಿ.
ರೇವತಿಯವರನ್ನು ಸಂಪರ್ಕಿಸಿದಾಗ "ಎಲ್ಲವು ಇನ್ನು ಯೋಜನೆಯ ಹಂತದಲ್ಲಿದೆ. ಈ ತಿಂಗಳ ಕೊನೆಯಲ್ಲಿ ನಾನು ವಿವರಗಳನ್ನು ನೀಡಬಲ್ಲೆ" ಎನ್ನುತ್ತಾರೆ. ಕನ್ನಡ ಅವತರಿಣಿಕೆಯನ್ನು ರೇವತಿ ನಿರ್ದೇಶಿಸಲಿದ್ದಾರೆಯೇ ಎಂಬುದು ಕೂಡ ಮುಂದೆಯೇ ತಿಳಿಯಲಿದೆ.
ವಿಕಾಸ್ ಭಾಳ್ ನಿರ್ದೇಶನದ ಹಿಂದಿ ಚಿತ್ರ 'ಕ್ವೀನ್' ಅಪಾರ ಜನ ಮೆಚ್ಚುಗೆ ಗಳಿಸಿತ್ತಲ್ಲದೆ, ಕಂಗನಾ ರಣಾವತ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಗಳಿಸಿಕೊಟ್ಟಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos