ಬೆಂಗಳೂರು: ನಿರ್ಮಾಪಕರಾಗಿ ಪೂಜಾ ಗಾಂಧಿಯವರ ಎರಡನೇ ಚಿತ್ರ, ಜೆ ಡಿ ಚಕ್ರವರ್ತಿ ನಿರ್ದೇಶನದ ಸಿನೆಮಾ ಆಗಸ್ಟ್ 26 ಕ್ಕೆ ಚಾಲನೆಗೊಳ್ಳಲಿದೆ. ಇದು ಬಹುಭಾಷಾ ಚಲನಚಿತ್ರವಾಗಿದ್ದು, 65 ಕ್ಕೂ ಹೆಚ್ಚು ಕಲಾವಿದರು ಒಟ್ಟಿಗೆ ಬರಲಿದ್ದಾರೆ ಎನ್ನುತ್ತವೆ ಮೂಲಗಳು.
ಮುಂಚಿನ ವರದಿಗಳ ಪ್ರಕಾರ ಚಿತ್ರತಂಡ ಅದ್ದೂರಿ ಹಾಡೊಂದನ್ನು ಯೋಜಿಸಿದ್ದು, ಅದರ ಚಿತ್ರೀಕರಣ 37 ದಿನಗಳವರೆಗೆ ನಡೆಯಲಿದೆ ಎಂದು ತಿಳಿದುಬಂದಿತ್ತು.
ತಮ್ಮ ಕೆಲಸ ಹೆಚ್ಚು ಮಾತನಾಡಬೇಕು ಎಂದು ನಂಬಿರುವ ನಿರ್ದೇಶಕ ಚಕ್ರವರ್ತಿ ಹೆಚ್ಚು ವಿವರಗಳನ್ನು ಬಿಟ್ಟುಕೊಡುವುದಿಲ್ಲ. ಸದ್ಯಕ್ಕೆ ಟೀಸರ್ ಬಿಡುಗಡೆಗೆ ಕಾಯುತ್ತಿದ್ದಾರೆ. ಸಿದ್ಧತೆಗಳ ಬಗ್ಗೆ ಚಿತ್ರತಂಡ ಕೂಡ ತುಟಿ ಬಿಚ್ಚದಿದ್ದರು ಚಿತ್ರೀಕರಣಕ್ಕೆ ಕೊನೆಯ ಹಂತದ ಸಿದ್ಧತೆಗಳು ಮುಗಿಯುತ್ತ ಬಂದಿವೆ ಎಂದು ತಿಳಿದುಬಂದಿದೆ. ಈ ಲವ್ ಥ್ರಿಲ್ಲರ್ ಭಾಗವಾಗಲು ಪೂಜಾ ಗಾಂಧಿ ತಮ್ಮ ಇತರ ಕೆಲಸಗಳಿಂದ ಬಿಡುವು ಪಡೆದಿದ್ದಾರೆ ಎಂದು ಕೂಡ ತಿಳಿದುಬಂದಿದೆ.
ಪೂಜಾ ಅವರ ಸಹೋದರಿ ರಾಧಿಕಾ ಗಾಂಧಿ ಕೂಡ ಈ ಯೋಜನೆಯ ಭಾಗವಾಗಿದ್ದು, ಸಿನೆಮಾದ ಸರಾಗ ಚಿತ್ರೀಕರಣ ಮತ್ತು ಇತರ ಕೆಲಸಗಳಿಗೆ ಸಹಕರಿಸಲಿದ್ದಾರಂತೆ.
ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನೆಮಾಗಳಲ್ಲಿ ಕೆಲಸ ಮಾಡಿರುವ ಚಕ್ರವರ್ತಿ ಇದೆ ಮೊದಲ ಬಾರಿಗೆ ಕನ್ನಡ ಸಿನೆಮಾ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.