ದಿಲೀಪ್ ಕುಮಾರ್-ಸಾಯಿರಾ ಬಾನು
ಮುಂಬೈ: ಬಾಲಿವುಡ್ ನ ಹಿರಿಯ ಪ್ರಸಿದ್ಧ ನಟ ದಿಲೀಪ್ ಕುಮಾರ್ ಗುಣಮುಖರಾಗುತ್ತಿದ್ದಾರೆ ಎಂದು ಅವರ ಪತ್ನಿ ಸಾಯಿರಾ ಬಾನು ತಿಳಿಸಿದ್ದಾರೆ.
93 ವರ್ಷ ವಯಸ್ಸಿನ ದಿಲೀಪ್ ಕುಮಾರ್ ಅವರನ್ನು ಮೊನ್ನೆ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಬಲ ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು.
ಅವರೀಗ ಬಹಳ ಗುಣಮುಖ ಹೊಂದುತ್ತಿದ್ದಾರೆ. ಆದರೂ ಕೂಡ ಅವರ ದೇಹದ ಪ್ರೊಫೈಲ್ ಮಾಡಬೇಕಾಗಿರುವುದರಿಂದ ಇಂದು ಮತ್ತು ನಾಳೆ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ. ಇಲ್ಲಿನ ವೈದ್ಯರು ಚೆನ್ನಾಗಿ ಆರೈಕೆ ಮಾಡುತ್ತಿದ್ದಾರೆ ಎಂದು ಸಾಯಿರಾ ಬಾನು ಸುದ್ದಿಸಂಸ್ಥೆಗೆ ತಿಳಿಸಿದರು.
ಇಂದು ಬೆಳಗ್ಗೆ ದೇಹದ ಮಸಾಜ್ ಮಾಡಿಕೊಂಡ ಮೇಲೆ ಉಪಾಹಾರ, ಟೀ ಸೇವಿಸಿದರು. ಚೆನ್ನಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದರು.
ತಮ್ಮ ಆರು ದಶಕಗಳ ಸುದೀರ್ಘ ಸಿನಿಮಾ ವೃತ್ತಿಯಲ್ಲಿ ದಿಲೀಪ್ ಕುಮಾರ್ ಅವರು ಸೂಪರ್ ಹಿಟ್ ಚಿತ್ರಗಳಾದ ಮದುಮತಿ, ದೇವದಾಸ್, ಮುಘಲ್-ಎ-ಅಜಂ, ಗಂಗಾ ಜಮುನಾ, ರಾಮ್ ಔರ್ ಶ್ಯಾಮ್ ಮತ್ತು ಕರ್ಮ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
1998ರಲ್ಲಿ ತೆರೆಕಂಡ ಖಿಲಾ ಚಿತ್ರದಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು.
1994ರಲ್ಲಿ ದಿಲೀಪ್ ಕುಮಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ, 2015ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಸಿಕ್ಕಿದೆ.