'ಸುಂದರಾಂಗ ಜಾಣ' ಸಿನೆಮಾದಲ್ಲಿ ಶಾನ್ವಿ ಶ್ರೀವಾಸ್ತವ ಮತ್ತು ಗಣೇಶ್
ಬೆಂಗಳೂರು: ನೋಟು ಹಿಂಪಡೆತ ನಿರ್ಧಾರದಿಂದ ಕನ್ನಡ ಚಿತ್ರರಂಗ ಕಷ್ಟದ ದಿನಗಳನ್ನು ಕಾಣುತ್ತಿದ್ದರು, ಕೆಲವು ನಿರ್ಮಾಪಕರು ಕ್ರಿಸ್ಮಸ್ ರಜೆಯ ಸದುಪಯೋಗ ಪಡೆಯಲು ಮುಂದಾಗಿದ್ದಾರೆ.
ರಮೇಶ್ ಅರವಿಂದ್ ನಿರ್ದೇಶನದ 'ಸುಂದರಾಂಗ ಜಾಣ', ಪ್ರೀತಮ್ ಗುಬ್ಬಿ ಅವರ 'ನಾನು ಮತ್ತು ವರಲಕ್ಷ್ಮಿ' ಮತ್ತು ಅಪೂರ್ವ ಕಾಸರವಳ್ಳಿ ಅವರ 'ನಿರುತ್ತರ' ಡಿಸೆಂಬರ್ 23 ರಂದು ಬಿಡುಗಡೆಗೆ ಸಜ್ಜಾಗಿದ್ದು, ಅಮೀರ್ ಖಾನ್ ನಟನೆಯ ಬಾಲಿವುಡ್ ಸಿನೆಮಾ 'ದಂಗಾಲ್'ನೊಂದಿಗೆ ಸೆಣಸಲಿವೆ.
ರಮೇಶ್ ಅರವಿಂದ್ ತಿಳಿಸುವಂತೆ 'ಸುಂದರಾಂಗ ಜಾಣ' ಮೊದಲೇ ನಿಗದಿಯಾದಂತೆ ಡಿಸೆಂಬರ್ ೯ ಕ್ಕೆ ಬಿಡುಗಡೆಯಾಗಬೇಕಿತ್ತಂತೆ, ಆದರೆ ನೋಟು ಹಿಂಪಡೆತ ನಿರ್ಧಾರದಿಂದ ಆಗಿರುವ ನಗದು ಬಿಕ್ಕಟ್ಟಿನಿಂದ ಮುಂದೂಡಲಾಯಿತಂತೆ. "ಬ್ಯಾಂಕ್ ಗಳಲ್ಲಿ ದೊಡ್ಡ ದೊಡ್ಡ ಸರತಿ ಸಾಲುಗಳಲ್ಲಿ ನಿಂತು ಹಣ ಪಡೆಯಲು ಕಷ್ಟ ಪಡುತ್ತಿದ್ದರು. ಆದುದರಿಂದ ಬಿಡುಗಡೆ ಮುಂದೂಡಲು ನಿರ್ಧರಿಸಿದೆವು. ಕ್ರಿಸ್ಮಸ್ ರಜಕ್ಕೆ ಜನ ವಿರಾಮದಲ್ಲಿ ನೋಡಲೆಂದು ಈ ದಿನಾಂಕ ಆರಿಸಿಕೊಂಡೆವು" ಎನ್ನುವ ಅವರು "ಈಗ ಕಾರ್ಮೋಡ ಕರಗಿದ್ದು, ಜನ ಥಿಯೇಟರ್ ಗಳ ಮುಂದೆ ಸಾಲುಗಟ್ಟಿ ನಿಲ್ಲಲಿದ್ದಾರೆ ಎಂದು ನಂಬಿದ್ದೇವೆ" ಎಂದಿದ್ದಾರೆ.
ತೆಲುಗು ಸಿನೆಮಾ 'ಭಲೇ ಭಲೇ ಮಾಗಾಡಿವೋಯ್' ನ ರಿಮೇಕ್ ಇದಾಗಿದ್ದು, ಗಣೇಶ್ ಮತ್ತು ಶಾನ್ವಿ ಶ್ರೀವಾಸ್ತವ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
'ನಾನು ಮತ್ತು ...' ಸಿನೆಮಾ ಬಿಡುಗಡೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರೀತಮ್ " ಈ ಸಿನೆಮಾ ನನ್ನ ಅತ್ಯುತ್ತಮ ಗೆಳೆಯ ಗಣೇಶ್ ಸಿನೆಮಾದೊಂದಿಗೆ ಬಿಡುಗಡೆಯಾಗುತ್ತಿದೆ ಹಾಗು 'ನಿರುತ್ತರ'ದಲ್ಲಿ ಕಿರಣ್ ಇದ್ದಾರೆ. ಅವರನ್ನು ನನ್ನ ನಿರ್ದೇಶನದ ಸಿನೆಮಾದಲ್ಲಿಯೇ ಪರಿಚಯಿಸಿದ್ದೆ. ಎಲ್ಲ ಸಿನೆಮಾಗಳು ವಿಭಿನ್ನವಾಗಿರುವುದರಿಂದ ಇಲ್ಲಿ ಸ್ಪರ್ಧೆಯೇನು ಇಲ್ಲ. 'ನಾನು ಮತ್ತು ವರಲಕ್ಷ್ಮಿ' ಪ್ರೀತಿಯ ಬಗ್ಗೆ ಆಗಿದ್ದು, ಇದು ಕ್ರಿಸ್ಮಸ್ ಹಬ್ಬಕ್ಕೆ ಪ್ರೇಕ್ಷಕರಿಗೆ ಉಡುಗೊರೆ" ಎನ್ನುತ್ತಾರೆ.