ಬೆಂಗಳೂರು: ಪ್ರೀತಿಯ ಸುತ್ತ ಸುತ್ತುವ ಹಲವು ಸಿನೆಮಾಗಳನ್ನು ಬರೆದು ನಿರ್ದೇಶಿಸಿರುವ ಪ್ರೀತಮ್ ಗುಬ್ಬಿ ಈಗ ತಮ್ಮ ಮುಂದಿನ ಬಿಡುಗಡೆ 'ನಾನು ಮತ್ತು ವರಲಕ್ಷ್ಮಿ'ಗಾಗಿ ಉತ್ಸಾಹದಿಂದ ಕಾಯುತ್ತಿದ್ದಾರೆ. ಸಿನೆಮಾದ ಕಥೆಯನ್ನು ರೇಸಿಂಗ್ ಜೊತೆಗೆ ಜೋಡಿಸಿದ್ದು ಅಡಿ ಶೀರ್ಷಿಕೆ 'ರೇಸ್ ವಿಥ್ ಲವ್' ಎಂದಿದೆ.
"ನನಗೆ ಪ್ರೀತಿ ಯಾವತ್ತೂ ಸ್ಫೂರ್ತಿ ನೀಡಿದೆ. ಈ ಸಿನೆಮಾದ ಹಿನ್ನಲೆಯಲ್ಲಿ ರೇಸಿಂಗ್ ಇದ್ದರೂ, ಹೆಚ್ಚು ಭಾವನೆಗಳ ಮೇಲೆ ನಿಂತಿರುವ ಸಿನೆಮಾ" ಎನ್ನುವ ನಿರ್ದೇಶಕ ಪ್ರೀತಮ್ "ಈ ಸಿನೆಮಾದಲ್ಲಿ ಪೃಥ್ವಿ ಬೈಕರ್ ಆಗಿ ಕಾಣಿಸಿಕೊಂಡಿದ್ದಾರೆ. ತನ್ನ ಪ್ರಿಯತಮೆ ವರಲಕ್ಷ್ಮಿಗೋಸ್ಕರ ಅವನ ರೇಸಿಂಗ್ ಇರುತ್ತದೆ" ಎನ್ನುತ್ತಾರೆ,
ರೇಸಿಂಗ್ ಗಾಗಿ ಟ್ರ್ಯಾಕ್ ಸಿದ್ಧಪಡಿಸಲು ಪಾಡುಬಿದ್ದ ಕಥೆಯನ್ನು ವಿವರಿಸುವ ನಿರ್ದೇಶಕ "ಟ್ರ್ಯಾಕ್ ಸಿದ್ಧಪಡಿಸಲು ೪೦ ದಿನಗಳ ಕಾಲ ಜೆಸಿಬಿ ಜೊತೆ ಮತ್ತು ಕೆಸರಿನಲ್ಲಿ ಕಾಲ ಕಳೆಯಬೇಕಾಯಿತು. ಈಗ ನೆನೆಸಿಕೊಂಡರೆ ಮೈನವಿರೇಳುತ್ತದೆ. ನನಗೆ ಇಂತಹ ಮತ್ತೊಂದು ಸಿನೆಮಾ ಮಾಡಲು ಸಾಧ್ಯವಿಲ್ಲ. ಅಪಾರ ಶ್ರಮ ಬೇಡುತ್ತದೆ" ಎನ್ನುತ್ತಾರೆ.
ಈ ಸಿನೆಮಾದಲ್ಲಿ ಮೂರು ಪ್ರಮುಖ ರೇಸ್ ಗಳು ಇರಲಿವೆಯಂತೆ. ಯಮಹ ಆರ್ ಎಕ್ಸ್ ೧೦೦ ನಿಂದ ಹಾರ್ಲಿ ಡೇವಿಡ್ಸನ್ ವರೆಗೆ ಹಲವು ಬೈಕ್ ಗಳು ಕಾಣಿಸಿಕೊಳ್ಳಲಿವೆಯಂತೆ. ವಿ ಹರಿಕೃಷ್ಣ ಅವರ ಸಂಗೀತ, ರವಿವರ್ಮ ಅವರ ಸಾಹಸ ಮತ್ತು ಪ್ರೀತಾ ಜಯರಾಮ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ.