'ಹೆಬ್ಬುಲಿ' ಆಡಿಯೋ ಬಿಡುಗಡೆಗೆ ಸಮಯ ಸನಿಹ
ಬೆಂಗಳೂರು: 'ಹೆಬ್ಬುಲಿ' ಚಿತ್ರತಂಡಕ್ಕೆ ಈ ವರ್ಷದ ಕ್ರಿಸ್ಮಸ್ ಹಬ್ಬ ವಿಶೇಷ! ದಾವಣಗೆರೆಯಲ್ಲಿ ಡಿಸೆಂಬರ್ ೨೫ ರಂದು ಸಿನೆಮಾದ ಅದ್ದೂರಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಸಿನೆಮಾದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಲ್ಲಿಯವರೆಗೂ ೧೦೦ ಕ್ಕೂ ಹೆಚ್ಚು ಲೈವ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ, ಆದರೆ ಇದೇ ಮೊದಲ ಬಾರಿಗೆ ಎಸ್ ಕೃಷ್ಣ ನಿರ್ದೇಶನದ, ಸುದೀಪ್ ನಟನೆಯ ಸಿನೆಮಾ ಕಾರ್ಯಕ್ರಮದಲ್ಲಿ ಲೈವ್ ಸಂಗೀತ ನಡೆಸಿಕೊಡುತ್ತಿರುವುದು.
ಸುದೀಪ್ ಜೊತೆಗೆ ಇಲ್ಲಿಯವರೆಗೂ ಐದು ಸಿನೆಮಾಗಳಲ್ಲಿ ಕೆಲಸ ಮಾಡಿರುವ ಅರ್ಜುನ್, ಈ ಮೆಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಠಿಣ ತರಬೇತಿ ನಡೆಸಿದ್ದಾರಂತೆ. "ಮೂರುವರೆ ಘಂಟೆಗಳ ಕಾರ್ಯಕ್ರಮ, ೩೦ ಕ್ಕೂ ಹೆಚ್ಚು ಸಂಗೀತಕಾರರು ಮತ್ತು ಗಾಯಕರ ತಂಡದಿಂದ ಮೂಡಿಬರಲಿದೆ" ಎನ್ನುವ ಅವರು "ತಂತ್ರಜ್ಞರಾಗಿ ನಾವುಗಳು ಹೆಚ್ಚೆಚ್ಚು ತೆರೆಯ ಹಿಂದೆಯೇ ಉಳಿದುಬಿಡುತ್ತೇವೆ. ಆದರೆ ನೇರ ಪ್ರದರ್ಶನಗಳನ್ನು ನೀಡುವುದು, ಪ್ರೇಕ್ಷಕರ ಜೊತೆಗೆ ಕನೆಕ್ಟ್ ಆಗಲು ಸಹಕರಿಸುತ್ತದೆ ಮತ್ತು ಇದೀಗ ಟ್ರೆಂಡ್" ಎಂದು ವಿವರಿಸುತ್ತಾರೆ.
ಈ ಕಾರ್ಯಕ್ರಮವನ್ನು ಸ್ಟಾರ್ ನಟನಿಗೆ ಅರ್ಪಿಸಲಾಗಿದೆಯಂತೆ. "ಅವರಿಗಾಗಿ ಸಂಯೋಜಿಸಲಾದ ಸುಶ್ರಾವ್ಯ ಹಾಡುಗಳ ಪ್ರದರ್ಶನ ನೀಡಲಿದ್ದೇನೆ" ಎನ್ನುವ ಅರ್ಜುನ್ "ನಂತರ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್, ಸುದೀಪ್ ಸಿನೆಮಾದ ಹಾಡುಗಳನ್ನು ಹಾಡಲಿದ್ದಾರೆ ಎಂದು ತಿಳಿಸುತ್ತಾರೆ. ನಂತರ ಹೆಬ್ಬುಲಿ ಸಿನೆಮಾದ ಹಾಡುಗಳೊಂದಿಗೆ ಈ ಕಾರ್ಯಕ್ರಮ ಮುಕ್ತಾಯವಾಗಲಿದೆ. ಇದೇ ಮೊದಲ ಬಾರಿಗೆ ಸಿನೆಮಾದ ಹಾಡೊಂದನ್ನು ರಾಜೇಶ್ ಕೃಷ್ಣ ಮತ್ತು ವಿಜಯ್ ಪ್ರಕಾಶ್ ಒಟ್ಟಿಗೆ ಹಾಡಿದ್ದಾರಂತೆ. ನಟ ರವಿಚಂದ್ರನ್ ಮತ್ತು ಸುದೀಪ್ ಸಹೋದರರ ಪಾತ್ರಗಳಲ್ಲಿ ನಟಿಸಿದ್ದು, ಅವರಿಗಾಗಿ ರಾಜೇಶ್ ಮತ್ತು ವಿಜಯ್ ಹಾಡಿದ್ದಾರೆ.
'ಹೆಬ್ಬುಲಿ' ಸಿನೆಮಾದಲ್ಲಿ ಐದು ಹಾಡುಗಳಿದ್ದು, ರಾಜೇಶ್, ವಿಜಯ್ ಜೊತೆಗೆ ಅನುರಾಧಾ ಭಟ್ ಕೂಡ ಹಾಡಿದ್ದಾರೆ. ಬಾಲಿವುಡ್ ಗಾಯಕರಾದ ಸಿದ್ಧಾರ್ಥ್ ಬಸರೂರ್, ಅರ್ಮಾನ್ ಮಲ್ಲಿಕ್, ಶಾನ್ ಮತ್ತು ಶ್ರೇಯಾ ಘೋಷಾಲ್ ಕೂಡ ಈ ಆಲ್ಬಂಗೆ ಕಂಠದಾನ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics