ನವದೆಹಲಿ: ಬಿಗ್ ಬಾಸ್ ಮನೆಯೊಳಗೆ ಸಾಯುವುದು ನನಗಿಷ್ಟವಿರಲಿಲ್ಲ. ಕೆಟ್ಟದಾಗಿ ನಡೆದುಕೊಳ್ಳದಿದ್ದರೆ ನನ್ನನ್ನು ಮನೆಯಿಂದ ಹೊರ ಹಾಕುತ್ತಿರಲಿಲ್ಲ. ಹೀಗಾಗಿ ಕೆಟ್ಟದಾಗಿ ನಡೆದುಕೊಂಡೆ ಎಂದು ಬಿಗ್ ಬಾಸ್ ಮನೆಯಿಂದ ಹೊರಬಂದ ಪ್ರಿಯಾಂಕಾ ಜಗ್ಗಾ ಅವರು ಹೇಳಿಕೊಂಡಿದ್ದಾರೆ.
ಬಿಗ್'ಬಾಸ್ 10 ಸ್ಪರ್ಧಿ ಪ್ರಿಯಾಂಕಾ ಜಗ್ಗಾ ಅವರನ್ನು ಸಲ್ಮಾನ್ ಖಾನ್ ಅವರು ಹೊರ ಹಾಕಿರುವುದಕ್ಕೆ ಸಾಕಷ್ಟು ಬೆಂಬಲಗಳು ವ್ಯಕ್ತವಾದ ಹಿನ್ನಲೆಯಲ್ಲಿ ತಮ್ಮ ದುರ್ವರ್ತನೆ ಕುರಿತಂತೆ ನಟಿ ಪ್ರಿಯಾಂಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಬಿಗ್ ಬಾಸ್ ಮನೆಯೊಳಗೆ ಸಾಯುವುದಿ ನನಗಿಷ್ಟವಿರಲಿಲ್ಲ. ಹೀಗಾಗಿಯೇ ಕೆಟ್ಟದಾಗಿ ನಡೆದುಕೊಂಡಿದ್ದೆ ಎಂದು ಹೇಳಿದ್ದಾರೆ.
ನನ್ನ ಆರೋಗ್ಯದಲ್ಲಿ ಸಮಸ್ಯೆ ಇದ್ದರಿಂದಾಗಿ ಮನೆಯೊಳಗೆ ಕೆಟ್ಟದಾಗಿ ನಡೆದುಕೊಳ್ಳಲೇಬೇಕಿತ್ತು. ಆರೋಗ್ಯ ತಪಾಸಣೆ ಮಾಡಲು ಬಿಗ್ ಬಾಸ್ ಮನೆಯೊಳಗೆ ಒಳ್ಳೆಯ ವೈದ್ಯರಿರಲಿಲ್ಲ. ಉತ್ತಮ ವೈದ್ಯರು ಸಿಗುತ್ತಿಲ್ಲ ಎಂದು ಬಿಗ್ ಬಾಸ್ ಹೇಳುತ್ತಲೇ ಬಂದಿದ್ದರು. ಮನೆಯಲ್ಲಿ ನೀಡುತ್ತಿದ್ದ ಆಹಾರ ಕೂಡ ಇಷ್ಟವಾಗುತ್ತಿರಲಿಲ್ಲ. ಹೊರಗಿನ ಆಹಾರಕ್ಕೆ ಪ್ರವೇಶವಿಲ್ಲ ಎಂದು ಹೇಳುತ್ತಿದ್ದರು. ಆರೋಗ್ಯ ಸರಿ ಇದ್ದಿದ್ದರೆ, ಖಂಡಿತವಾಗಿಯೂ ಬಿಗ್ ಬಾಸ್ ಮನೆಯಲ್ಲಿರುತ್ತಿದ್ದೆ.
ನನಗೆ ನನ್ನ ಆರೋಗ್ಯವೇ ಮುಖ್ಯವಾಗಿದ್ದು, ಆರೋಗ್ಯಕ್ಕಿಂತ ಬೇರೆ ಯಾವುದೂ ಅಗತ್ಯವಿಲ್ಲ. ಮನೆಯಿಂದ ಹೊರಬರಬೇಕಿದ್ದರೆ, ಒಂದು ಮನೆಯಲ್ಲಿರುವ ವಸ್ತುಗಳನ್ನು ನಾಶ ಮಾಡಬೇಕಿತ್ತು. ಇಲ್ಲವೇ, ಕೆಟ್ಟದಾಗಿ ನಡೆದುಕೊಳ್ಳಬೇಕಿತ್ತು. ಮನೆಯಿಂದ ಹೊರಬರುವುದಷ್ಟೇ ನನ್ನ ಗುರಿಯಾಗಿತ್ತು.
ಪ್ರತೀಬಾರಿ ಕನ್ಫೆಷನ್ ರೂಮ್ ಗೆ ಹೋದಾಗಲೂ ನಾನು ಮನೆಯಿಂದ ಹೊರಹೋಗಬೇಕೆಂದು ಹೇಳುತ್ತಿದ್ದೆ. ಈ ವೇಳೆ ನೀವು ತುಂಬಾ ಧೈರ್ಯವಂತರು. ನಿಮ್ಮಿಂದ ಸಾಧ್ಯವಾಗುತ್ತದೆ. ಜನರಿಗೆ ಮನರಂಜನೆ ನೀಡಿ ಎಂದು ಹೇಳುತ್ತಿದ್ದರು. ಮನೆಯಿಂದ ಒಂದು ಬಾರಿ ಹೊರ ಬಂದ ನಂತರ ಕೂಡ ಮತ್ತೆ ಮನೆಯೊಳಗೆ ಕಳುಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದ ಒಂದೊಂದು ಸೆಕೆಂಡ್ ಕೂಡ ವಿಷದಂತೆ ಎನಿಸುತ್ತಿತ್ತು.
ಮಾಧ್ಯಮಗಳು ಏನನ್ನೂ ಬೇಕಾದರೂ ಹೇಳಲಿ, ಯಾರೂ ಏನನ್ನೇ ಹೇಳಲಿ ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಸೆಲೆಬ್ರಿಟಿ ಅಲ್ಲ. ನಾನು ಏನನ್ನೇ ಮಾಡಿದ್ದರೂ ಅದು ನನ್ನ ಪ್ರಕಾರ ಸರಿಯಿದೆ. ಯಾರು ಏನೇ ಟೀಕೆ ಮಾಡಿದರೂ ಅದು ನನಗೆ ಬೇಕಿಲ್ಲ. ನನ್ನ ಪತಿಗೆ ನಾನೇನು ಎಂಬುದು ಗೊತ್ತಿದೆ. ಸಮರ್ಥನೆ ಕೊಡುವ ಅಗತ್ಯವಿಲ್ಲ. ಜೀವನದಲ್ಲಿ ಪ್ರಮುಖವಾಗಿ ಹಾಗೂ ಅಗತ್ಯವಾಗಿ ಬೇಕಾಗಿರುವುದು ನನ್ನ ಬಳಿ ಇದೆ ಅಷ್ಟು ಸಾಕು ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.