ಸಿನಿಮಾ ಸುದ್ದಿ

ಚಿತ್ರ ಪ್ರದರ್ಶನಕ್ಕೆ ಇಂದು ತೆರೆ

Sumana Upadhyaya

ಬೆಂಗಳೂರು: ಎಂಟನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಮಖ ಘಟ್ಟಕ್ಕೆ ತಲುಪಿದೆ. ಪ್ರದರ್ಶನಕ್ಕೆ ಆಯ್ಕೆಯಾಗಿದ್ದ ಚಿತ್ರಗಳಿಗೆ ಇಂದು ಕೊನೆಯ ಆಟ. ಬೆಂಗಳೂರಿನ ಒರಾಯನ್ ಮಾಲ್ ಮತ್ತು ಮೈಸೂರಿನ ಐನಾಕ್ಸ್ ನಲ್ಲಿ ನಡೆಯುತ್ತಿರುವ ಸಿನಿಮೋತ್ಸವದ ಚಿತ್ರ ಪ್ರದರ್ಶನಗಳು ಅಧಿಕೃತವಾಗಿ ಗುರುವಾರ ರಾತ್ರಿ 10 ಗಂಟೆಗೆ ಮುಕ್ತಾಯವಾಗಲಿದೆ.ಸಿನಿಮೋತ್ಸವದ ಸಮಾರೋಪ ಸಮಾರಂಭ ಅಧಿಕೃತವಾಗಿ ನಾಳೆ ಸಂಜೆ 5.30ಕ್ಕೆ ಮೈಸೂರಿನ ಅರಮನೆ ಆವರಣದಲ್ಲಿ ನಡೆಯಲಿದೆ.

ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾರ್ತಾ ಸಚಿವ ರೋಷನ್ ಬೇಗ್ ಸೇರಿದಂತೆ ಚಿತ್ರರಂಗದ ಅನೇಕ ಮಂದಿ ಗಣ್ಯರು ಹಾಜರಿದ್ದು, ಸಿನಿಮೋತ್ಸವದಲ್ಲಿ ತೀರ್ಪುಗಾರರಿಂದ ಮೆಚ್ಚುಗೆ ಪಡೆದ ಚಿತ್ರಗಳಿಗೆ ಪ್ರಶಸ್ತಿ ವಿತರಿಸಲಿದ್ದಾರೆ. ಸಮಾರೋಪದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಾಳೆ ಚಿತ್ರೋದ್ಯಮ ಸ್ವಯಂಘೋಷಿತವಾಗಿ ಬಂದ್ ಆಚರಿಸುತ್ತಿದೆ. ಈ ಮೂಲಕ ಸಮಾರಂಭದಲ್ಲಿ ಚಿತ್ರೋದ್ಯಮದ ಎಲ್ಲ ವಿಭಾಗಗಳ ಸಿಬ್ಬಂದಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.

ಸಿನಿಮೋತ್ಸವದ ಕೊನೆಯ ದಿನವಾದ ಇಂದು ಸೀತಾರಾಮ್ ಶಾಸ್ತ್ರಿ ನಿರ್ದೇಶನದ ಮಹಾಕವಿ ಕಾಳಿದಾಸ, ಎಸ್. ನಾರಾಯಣ್ ನಿರ್ದೇಶನದ ದಕ್ಷ ಹಾಗೂ ಮಹಾದೇವ್ ರಾವ್ ನಿರ್ದೇಶನದ ಚಿಗುರು ಕನ್ನಡ ಚಿತ್ರಗಳ ಜತೆಗೆ ವಿವಿಧ ಭಾಷೆಯ ಹಲವು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಬೆಂಗಾಲಿಯ ಸಿನಿಮಾವಾಲಾ ಹಾಗೂ ಕೊಸೊವೊದ ದಿ ಹೀರೋ ಮರುಪ್ರದರ್ಶನದ ಜತೆಗೆ, ಕಝಕಿಸ್ತಾನದ ಸ್ಟ್ರೇಂಜರ್, ಡೆನ್ಮಾರ್ಕ್ ನ ಬರಬರ ಚಿತ್ರಗಳು ಕುತೂಹಲ ಮೂಡಿಸಿವೆ.

SCROLL FOR NEXT