ಕೊನೆಗೂ 28 ವರ್ಷಗಳ ಬಳಿಕ ಪದವಿ ಪತ್ರ ಪಡೆದ ನಟ ಶಾರುಖ್
ನದವೆಹಲಿ: 28 ವರ್ಷಗಳ ಬಳಿಕ ಕೊನೆಗೂ ಬಾಲಿವುಡ್ ನಟ ಶಾರುಖ್ ಖಾನ್ ಅವರು ತಾವು ವ್ಯಾಸಾಂಗ ಮಾಡಿದ ಹನ್ಸ್ ರಾಜ್ ಕಾಲೇಜಿನಲ್ಲಿ ಪದವಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ.
ಕಾರ್ಯಕ್ರಮವೊಂದರ ಪ್ರಚಾರಕ್ಕಾಗಿ ಶಾರುಖ್ ಖಾನ್ ಅವರು ಹನ್ಸ್ ರಾಜ್ ಕಾಲೇಜಿಗೆ ಭೇಟಿ ನೀಡಿದ್ದರು. ಕಾಲೇಜಿನ ಆವರಣ ಪ್ರವೇಶಿಸುತ್ತಿದ್ದಂತೆ ಶಾರುಖ್ ನೆನಪಿನಂಗಳಕ್ಕೆ ಜಾರಿದ್ದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದ ಅವರು, ಇದು ನಿಜಕ್ಕೂ ವಿಶೇಷ ಸಂದರ್ಭವಾಗಿದ್ದು, ಕಾಲೇಜು ಬಿಟ್ಟ ನಂತರ ಈಗ ಮತ್ತೆ ಕಾಲೇಜಿಗೆ ಕಾಲಿಡುತ್ತಿದ್ದೇನೆ. 1998ರಿಂದಲೂ ನಾನು ನನ್ನ ಪದವಿ ಪ್ರಮಾಣ ಪತ್ರವನ್ನು ಪಡೆದಿರಲಿಲ್ಲ. ಇಂದು ಆ ಪದವಿ ಪ್ರಮಾಣ ಪತ್ರವನ್ನು ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಶಾರುಖ್ ಖಾನ್ ಕಾಲೇಜಿಗೆ ಭೇಟಿ ನೀಡುತ್ತಿದ್ದಂತೆ ಅಸಹಿಷ್ಣುತೆ ಕುರಿತಂತೆ ಈ ಹಿಂದೆ ಶಾರುಖ್ ನೀಡಿದ್ದ ಹೇಳಿಕೆ ವಿರೋಧಿ ಎಬಿವಿಪಿ ಕಾರ್ಯಕರ್ತರು ಕಾಲೇಜು ಆವರಣದಲ್ಲಿ ಪ್ರತಿಭಟನೆಗಿಳಿದಿದ್ದರು. ಅಲ್ಲದೆ, ಶಾರುಖ್ ಅವರ ಕಾರನ್ನು ತಡೆಯುವ ಪ್ರಯತ್ನವನ್ನು ಮಾಡಿದ್ದಾರೆ ಮತ್ತು ಶಾರುಖ್ ವಿರುದ್ಧ ಹಲವು ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿದ್ದಾರೆ ಎಂದು ತಿಳಿದುಬಂದಿದೆ.