ಸಿನಿಮಾ ಸುದ್ದಿ

ಅತಿ ಹೆಚ್ಚು ಟ್ವೀಟ್ ದಾಖಲೆ ಮುರಿದ ಡಿಕ್ಯಾಪ್ರಿಯೋ ಆಸ್ಕರ್ ವಿಜೇತ ಸುದ್ದಿ

Guruprasad Narayana

ಲಾಸೇಂಜಲೀಸ್: ಹಾಲಿವುಡ್ ನಟ ಲಿಯನಾರ್ಡೋ ಡಿಕ್ಯಾಪ್ರಿಯೋ, 'ದ ರೆವೆನ್ಯಾಂಟ್' ಸಿನೆಮಾದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ಸುದ್ದಿ ನಿಮಿಷಕ್ಕೆ ೪,೪೦,೦೦೦ ಟ್ವೀಟ್ ಗಳನ್ನು ಸಂಪಾದಿಸಿದೆ. ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದ ನೇರ ಪ್ರಸಾರದ ವೇಳೆಯಲ್ಲಿ ಅತಿ ಹೆಚ್ಚು ಟ್ವೀಟ್ ಮಾಡಲಾದ ಸಂದರ್ಭ ಇದು ಎನ್ನಲಾಗಿದೆ.

ಡಿಕ್ಯಾಪ್ರಿಯೋ ತಮ್ಮ ಚೊಚ್ಚಲ ಆಸ್ಕರ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಮಾಡಲಾದ ಟ್ವೀಟ್ ಗಳ ಸಂಖ್ಯೆ, ೨೦೧೪ರ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ನಟಿ ಎಲ್ಲೆನ್ ಡಿಜನರೆಸ್ ಇತರ ತಾರೆಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ಬರೆಯಲಾಗಿದ್ದ ನಿಮಿಷಕ್ಕೆ ೨,೫೫,೦೦೦ ಟ್ವೀಟ್ ದಾಖಲೆಯನ್ನು ಅಳಿಸಿ ಹಾಕಿದೆ.

೮೮ನೆಯ ಆಸ್ಕರ್ ಸಮಾರಂಭದ ಎರಡನೆಯ ಹಾಗೂ ಮೂರನೆಯ ಸ್ಥಾನದಲ್ಲಿ ಅತಿ ಹೆಚ್ಚು ಟ್ವೀಟ್ ಮಾಡಿದ ಸಂದರ್ಭಗಳೆಂದರೆ, 'ಸ್ಪಾಟ್ಲೈಟ್' ಅತ್ಯುತ್ತಮ ಸಿನೆಮಾ ಮತ್ತು 'ಮ್ಯಾಡ್ ಮ್ಯಾಕ್ಸ್ ಫ್ಯುರಿ' ಆರನೇ ಆಸ್ಕರ್ ಪ್ರಶಸ್ತಿ ಪಡೆದ ಕ್ಷಣಗಳು ಎಂದು ತಿಳಿದುಬಂದಿದೆ.

ಭಾನುವಾರ ರಾತ್ರಿ ವಿಶ್ವ ವಿಖ್ಯಾತ ಡಾಲ್ಬಿ ಚಿತ್ರಮಂದಿರದಲ್ಲಿ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

SCROLL FOR NEXT