ಎರಡು ತಿಂಗಳ ಕೆಳಗೆ ಜಗತ್ತಿನ ಬಹುತೇಕ ಕಿವಿಗಳಿಗೆ ಈ ಸುದ್ದಿ ತಲುಪಿತು. ಆನಂದ ಬಾಷ್ಪ ಸ್ಫುರಿಸಿ, ಹೃದಯವನ್ನೂ ತಟ್ಟಿತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಚಿಂದಿ ಆಯುವ ಹೆಂಗಸಿನ ಮಗಳು 'ಮಿಸ್ ಅನ್‍ಸೆನ್ಸಾರ್ಡ್ ನ್ಯೂಸ್ ಥಾಯ್ಲೆಂಡ್' ಆಗಿ ಬಂದು, ತಾಯಿಯ ಕಾಲಿಗೆ ನಮಸ್ಕರಿಸುತ್ತಿರುವ ಫೋಟೋ ಕೂಡ ವೈರಲ್ ಆಗಿತ್ತು. 17 ವರುಷದ ಖನ್ನಿತ್ತಾ ಮಿಂಟ್ ಪಾಸೆಂಗ್ 'ಮಿಸ್ ಅನ್ ಸೆನ್ಸಾರ್ಡ್ ನ್ಯೂಸ್ ಥಾಯ್ಲೆಂಡ್' ಆದವಳು. ಸ್ಪರ್ಧೆಗೆ ಕೆಲವೇ ದಿನಗಳಿದ್ದಾಗ ಈಕೆಯೂ ತಾಯಿಯೊಂದಿಗೆ ಬೀದಿಯಲ್ಲಿ ಹಳೇ ಪ್ಲಾಸ್ಟಿಕ್ ಬಾಟಲಿಗಳನ್ನು ಚೀಲಕ್ಕೆ ತುಂಬುವುದು, ಕಾಗದದ ರಟ್ಟುಗಳನ್ನು ಮೂಟೆ ಕಟ್ಟುವುದನ್ನು ಮಾಡುತ್ತಿದ್ದಳು. ಮಗಳ ಸಹಜ ಸೌಂದರ್ಯವನ್ನು ಇಮ್ಮಡಿಗೊಳಿಸಲು ಕನಿಷ್ಠ ಮೇಕಪ್ ಕಿಟ್ ಅನ್ನೂ ತಾಯಿಯಿಂದ ಕೊಡಿಸು ವುದಕ್ಕೆ ಆಗಿರಲಿಲ್ಲ. ಅಷ್ಟು ಕಡು ಬಡತನದಿಂದ ಬಂದ ಹುಡುಗಿಗೆ ಥಾಯ್ಲೆಂಡ್ ಸೌಂದರ್ಯ ಸ್ಪರ್ಧೆಯ ಈ ಪಟ್ಟ ಪ್ರಯಾಸವಿಲ್ಲದೆ ಲಭಿಸಿತ್ತು. ಮಗಳ ಸೌಂದರ್ಯದ ಇಮೇಜ್ ಈಗ ತಾಯಿಗೆ ಸಂಕಟ ತಂದಿದೆಯಂತೆ. ಜಾಹೀರಾತುಗಳಿಗೆ ಮಾಡೆಲ್ ಆಗಲು ಆಫರ್‍ಗಳು ಬರುತ್ತಿವೆ. ನಿಮಾದಲ್ಲಿ ನಟಿಸುವಂತೆ ಅನೇಕ ನಿರ್ದೇಶಕರು ಮನೆ ಬಾಗಿಲಿಗೆ ಬರುತ್ತಿದ್ದಾರೆ. ಈ ಜಾಹೀರಾತು, ಸಿನಿಮಾ ಲೋಕವೆಲ್ಲ ತಾಯಿಗೆ ತೀರಾ ಹೊಸತು. 'ನಾನು ಮೊದಲೇ ಸಿಂಗಲ್ ಮದರ್. ಅಪ್ಪನಿಲ್ಲದ ಜಗತ್ತಿನಲ್ಲಿ ಪ್ರೀತಿಯಿಂದ ಮಗಳನ್ನು ಸಾಕಿದ್ದೇನೆ. ಮಗಳನ್ನು ನಟನೆಯ ಪ್ರಪಂಚಕ್ಕೆ ಕಳುಹಿಸಿದರೆ ನನ್ನಿಂದ ಎಲ್ಲಿ ಅವಳು ದೂರ ಆಗುತ್ತಾಳೋ ಎಂಬ ಭಯ ಕಾಡುತ್ತಿದೆ. ಆದರೆ ನನ್ನ ಆತಂಕದ ಕಾರಣಕ್ಕೆ ಮಗಳ ಪ್ರತಿಭೆ ಇಲ್ಲಿಯೇ ನಿಲ್ಲಬಾರದು. ಅವಳು ನಟಿಯಾಗಿ ಅರಳಬೇಕು' ಎನ್ನುತ್ತಿದ್ದಾಳೆ ತಾಯಿ. ಮಗಳು ಖನ್ನಿತ್ತಾ ಪಾಸೆಂಗ್ ಅಮ್ಮನ ಗ್ರೀನ್ ಸಿಗ್ನಲ್ ಸಿಗುವುದನ್ನೇ ಕಾಯುತ್ತಿದ್ದಾಳಂತೆ.