'ರನ್ ಆಂಟನಿ' ಚಿತ್ರದ ಸ್ಟಿಲ್
ಬೆಂಗಳೂರು: ಚೊಚ್ಚಲ ನಿರ್ದೇಶಕ ರಘು ಶಾಸ್ತ್ರಿ ತಮ್ಮ ಮೊದಲ ಸಿನೆಮಾ ಮುಗಿಸಿ ಬಿಡುಗಡೆಯ ತವಕದಲ್ಲಿದ್ದು, ಸಾಧಾರಣ ಸಂಗತಿಗಳನ್ನು ಅಸಾಧಾರಣವಾಗಿ ಮಾಡುವ ಮೂಲಕ ಫಾರೆಸ್ಟ್ ಗಂಪ್ ರೀತಿಯಲ್ಲಿ ಇಲ್ಲಿಯವರೆಗೂ ಬಂದಿದ್ದೇನೆ ಎನ್ನುತ್ತಾರೆ.
ಅವರ ನಿರ್ದೇಶನದ 'ರನ್ ಆಂಟನಿ' ಮುಂದಿನ ವಾರ ಬಿಡುಗಡೆಗೆ ಸಜ್ಜಾಗಿದ್ದು, 27 ವರ್ಷದ ನಿರ್ದೇಶಕ ಈ ಸಿನೆಮಾ ಮಾಡಲು ತಮ್ಮ ಸ್ಫೂರ್ತಿಯನ್ನು ವಿವರಿಸುತ್ತಾರೆ. "ನನಗೇ ತಿಳಿಯದಂತೆ ಸಿನೆಮಾದ ಬಹುತೇಕ ಎಲ್ಲ ಆಯಾಮಗಳಲ್ಲೂ ನಾನು ತೊಡಗಿಸಿಕೊಂಡಿದ್ದೆ. ಯುವಕರಿಗೆ ಇದಕ್ಕಿಂತಲೂ ಒಳ್ಳೆಯ ಅನುಭವ ಸಿಗುವುದು ಕಷ್ಟ. ಆದುದರಿಂದ ನಾನು ಮಾಡುವ ಸಿನೆಮಾದ ಪ್ರತಿ ಪಾತ್ರವನ್ನು ನನ್ನ ಜೀವನದಲ್ಲಿ ಕಂಡಿದ್ದೇನೆ" ಎನ್ನುತ್ತಾರೆ ರಘು.
ವಿನಯ್ ರಾಜಕುಮಾರ್ ನಟಿಸಿರುವ, ವಜ್ರೇಶ್ವರಿ ಕಂಬೈನ್ಸ್ ನಿರ್ಮಾಣದ ಈ ಚಿತ್ರದ ನಿರ್ದೇಶಕ ಈ ಹಿಂದೆ ಮುಂಬೈನಲ್ಲಿ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರೊಂದಿಗೆ ಕೆಲಸ ಮಾಡಿರುವುದಾಗಿ ತಿಳಿಸುತ್ತಾರೆ. "ನಾನು ಮೂರನೇ ತರಗತಿಯಲ್ಲೇ ಮನೆ ತೊರೆದೆ. ವಿದ್ಯಾರ್ಥಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಬೆಳೆದ ನಾನು ಬಹಳಷ್ಟು ಪ್ರಯಾಣ ಮಾಡಿ ಸಾಕಷ್ಟು ಜನರನ್ನು ಭೇಟಿ ಮಾಡಿದ್ದೇನೆ. ನಾನು ಕಂಡಿರುವ, ಜೀವಿಸಿರುವ ಕಥೆಗಳು ಅನುಭವಗಳು ಒಳ್ಳೆಯ ಸಿನೆಮಾ ಮಾಡಲು ಸಾಕಲ್ಲವೇ" ಎನ್ನುತ್ತಾರೆ.
ತಾನು ಕೆಲಸ ಮಾಡಿರುವ ಹಿರಿಯರಾದ ಅನುರಾಗ್ ಅಥವಾ ಕಮಲ ಹಾಸನ್ ಅವರಿಂದ ಪ್ರಭಾವಗೊಂಡಿಲ್ಲ ಎನ್ನುವ ಅವರು ಮುಂಬೈನಲ್ಲಿ ನಡೆಸಿದ ಜೀವನವೇ 'ರನ್ ಆಂಟನಿ'ಗೆ ಸ್ಫೂರ್ತಿ ಎನ್ನುತ್ತಾರೆ.
ಕರಮ್ ಚಾವಲಾ ಸಿನೆಮಾಗೆ ಛಾಯಾಗ್ರಹಣ ಮಾಡಿದ್ದು ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.