ಬೆಂಗಳೂರು: ಜಯಣ್ಣ ಕಂಬೈನ್ಸ್ ನಿರ್ಮಾಣ ಸಂಸ್ಥೆ ತಮ್ಮ ಮುಂದಿನ ಚಿತ್ರ 'ಮಫ್ತಿ'ಗೆ ಮತ್ತೆ ನಟಿ ಶಾನ್ವಿ ಶ್ರೀವಾಸ್ತವ ಅವರನ್ನು ಆಯ್ಕೆ ಮಾಡಿದೆ. ಇದೆ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಭರತ್ ನಿರ್ದೇಶನದ 'ಸಾಹೇಬ' ಸಿನೆಮಾದಲ್ಲಿ ಮನೋರಂಜನ್ ಜೊತೆಗೆ ಶಾನ್ವಿ ನಟಿಸುತ್ತಿದ್ದಾರೆ. ಈಗ ನೂತನ ಸಿನೆಮಾದಲ್ಲಿ ಅವರು ಶ್ರೀಮುರಳಿ ಎದುರು ನಟಿಸಲಿದ್ದಾರೆ.
ಈ ದೊಡ್ಡ ಸಿನೆಮಾದ ಭಾಗವಾಗಿರುವುದಕ್ಕೆ ಉತ್ಸುಕರಾಗಿರುವ ಶಾನ್ವಿ "'ಮಫ್ತಿ' ಸಿನೆಮಾದ ನಾಯಕ ನಟಿಯ ಪಾತ್ರಕ್ಕೆ ನನ್ನನ್ನು ಪರಿಗಣಿಸಿದ್ದಾರೆ ಎಂದು ಕೆಲವರಿಂದ ಕೇಳಿದ್ದೆ. ಜಯಣ್ಣ ಅವರು ನನಗೆ ಪಾತ್ರ ನೀಡುವುದಕ್ಕೆ ಉತ್ಸುಕರಾಗಿದ್ದಾರೆ ಎಂದು ತಿಳಿದಿತ್ತು ಈಗ ಕಳೆದ ಎರಡು ದಿನಗಳಲ್ಲಿ ಎಲ್ಲವೂ ಧೃಢೀಕರಣ ಆಗಲಿದೆ. ನಾನು ಪಾತ್ರಕ್ಕೆ ಸರಿ ಹೊಂದುತ್ತೇನೆ ಮತ್ತು ಅವರಿಗೆ ಹೆಚ್ಚು ತೊಂದರೆ ನೀಡುವುದಿಲ್ಲವಾದ್ದರಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದೆನಿಸುತ್ತದೆ" ಎನ್ನುತ್ತಾರೆ.
"ದೊಡ್ಡ ನಿರ್ಮಾಣ ಸಂಸ್ಥೆಯ ಚಿತ್ರದಲ್ಲಿ ನಟಿಸುವುದು ಚೆನ್ನಾಗಿರುತ್ತದೆ. ನಟ ಶ್ರೀಮುರಳಿ ಮತ್ತು ನಿರ್ದೇಶಕ ನಾರ್ಥನ್ ಇವರುಗಳನ್ನು ಬಿಟ್ಟರೆ ಉಳಿದ ತಂಡ ನನಗೆ ಚೆನ್ನಾಗಿ ಗೊತ್ತು. ಆದುದರಿಂದ ಕೆಲಸ ಸುಲಭ" ಎನ್ನುತ್ತಾರೆ ಶಾನ್ವಿ.
ಸದ್ಯಕ್ಕೆ 'ಸಾಹೇಬಾ' ಮತ್ತು 'ಗಂಡು ಎಂದರೆ ಗಂಡು' ಸಿನೆಮಾಗಳಲ್ಲಿ ಸಮಾನಾಂತರವಾಗಿ ನಟಿಸುತ್ತಿರುವ ನಟಿ ಶಾನ್ವಿ ಆಗಸ್ಟ್ ನಲ್ಲಿ 'ಮಫ್ತಿ' ಸೆಟ್ ಸೇರಲಿದ್ದಾರೆ. ಶ್ರೀಮುರಳಿ ಜೊತೆಗೆ ಇದೆ ಮೊದಲ ಬಾರಿಗೆ ಅವರು ನಟಿಸುತ್ತಿದ್ದಾರೆ.
'ಮಫ್ತಿ' ಮೊದಲ ಬಾರಿಗೆ ಶ್ರೀಮುರಳಿ ಮತ್ತು ಶಿವರಾಜ್ ಕುಮಾರ್ ಅವರನ್ನು ಒಟ್ಟಿಗೆ ತರಲಿದೆ ಹಾಗೆಯೇ ನಾರ್ಥನ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ.