'ರಾಜಕುಮಾರ' ಸೆಟ್ ನಲ್ಲಿ ಪುನೀತ್ ಅವರೊಂದಿಗೆ ಸುದೀಪ್
ಬೆಂಗಳೂರು: 'ಹೆಬ್ಬುಲಿ' ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಸುದೀಪ್, ಮೈಸೂರಿನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಪುನೀತ್ ರಾಜಕುಮಾರ್ ಅವರ 'ರಾಜಕುಮಾರ' ಸೆಟ್ ಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ಭೇಟಿ ನಡೆದಿದ್ದರೆ ಸಣ್ಣ ವಿವರ ಇಲ್ಲಿದೆ.
ಪುನೀತ್ ರಾಜಕುಮಾರ್ ಅವರ ಸಿನೆಮಾ ಹತ್ತಿರದಲ್ಲೇ ಚಿತ್ರೀಕರಣಗೊಳ್ಳುತ್ತಿದೆ ಎಂದು ತಿಳಿದ ನಟ ಸುದೀಪ್ ತಮ್ಮ ಹಯಬುಸ ವಾಹನದಲ್ಲಿ ಸೆಟ್ ಗೆ ತೆರಳಿದರು ಎಂದು ತಿಳಿಸುವ ಮೂಲಗಳು "ಸುದೀಪ್ ಮತ್ತು 'ಹೆಬ್ಬುಲಿಯ' ನಿರ್ಮಾಪಕರಲ್ಲಿ ಒಬ್ಬರಾದ ಉಮಾಪತಿ ಫಿಲ್ಮ್ ಸೆಟ್ ಗಳಿಗೆ ಹಯಬುಸ ಗಾಡಿಯಲ್ಲಿಯೇ ಒಟ್ಟಿಗೆ ಓಡಾಡುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರು ಮಾರ್ಗ ಮಧ್ಯವಾಗಿಯೂ ಬೈಕ್ ನಲ್ಲಿಯೇ ಚಲಿಸಿದ್ದಾರೆ. ಪೂರ್ತಿ ಮುಖ ಮುಚ್ಚುವ ಹೆಲ್ಮೆಟ್ ಧರಿಸಿ ಓಡಾಡುತ್ತಿರುವುದರಿಂದ ಸಾರ್ವಜನಿಕರಿಗೆ ತಿಳಿಯುತ್ತಿಲ್ಲ" ಎನ್ನುತ್ತಾರೆ.
ಸೆಟ್ ನಲ್ಲಿ ಪುನೀತ್ ಅವರೊಂದಿಗೆ ಕೆಲವು ಕ್ಷಣಗಳನ್ನು ಸುದೀಪ್ ಕಳೆದರು ಎನ್ನುವ ಮೂಲಗಳು, 'ರಾಜಕುಮಾರ' ಸಿನೆಮಾದ ನಿರ್ದೇಶಕ ಸಂತೋಷ್ ಆನಂದರಾಮ್ ಕೂಡ ಜೊತೆಗಿದ್ದರು ಎಂದು ತಿಳಿಸುತ್ತಾರೆ.
ಎಸ್ ಕೃಷ್ಣ ನಿರ್ದೇಶನದ 'ಹೆಬ್ಬುಲಿ' ಚಿತ್ರತಂಡ ಮೈಸೂರಿನಲ್ಲಿ ಚಿತ್ರೀಕರಣ ಮುಗಿಸಿದ್ದು ನಗರಕ್ಕೆ ಹಿಂದಿರುಗಿ ಮುಂದಿನ ಹಂತದ ಚಿತ್ರೀಕರಣ ಪ್ರಾರಂಭಿಸಲಿದೆ. ಸುದೀಪ್ ಅವರ 'ಕೋಟಿಗೊಬ್ಬ-2' ಚಿತ್ರ ಆಗಸ್ಟ್ 12ಕ್ಕೆ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.