ಜೋಹಾನ್ಸ್ ಬರ್ಗ್: ಟರ್ಮಿನೇಟರ್ ಖ್ಯಾತಿಯ ಹಾಲಿವುಡ್ ನಟ ಅರ್ನಾಲ್ಡ್ ಶ್ವಾರ್ಜಿನೆಗರ್ ಅವರನ್ನು ಆಫ್ರಿಕಾದ ಕಾಡಾನೆಯೊಂದು ಅಟ್ಟಾಡಿಸಿದ್ದು, ಕೂದಲೆಳೆ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅರ್ನಾಲ್ಡ್ ಸ್ಪೋರ್ಟ್ಸ್ ಫೆಸ್ಟಿವಲ್ ನ ಪ್ರಚಾರಕ್ಕಾಗಿ ದಕ್ಷಿಣ ಆಫ್ರಿಕಾಗೆ ತೆರಳಿದ್ದ ಅರ್ನಾಲ್ಡ್, ಬಿಡುವಿನ ವೇಳೆಯಲ್ಲಿ ಸಫಾರಿಗೆ ತೆರಳಿದ್ದಾರೆ. ಈ ವೇಳೆ ಅರ್ನಾಲ್ಡ್ ಅವರಿದ್ದ ಕಾರನ್ನು ಆಫ್ರಿಕಾದ ದೈತ್ಯ ಕಾಡಾನೆಯೊಂದು ಅಟ್ಟಾಡಿಸಿದ್ದು, ಅರ್ನಾಲ್ಡ್ ಮತ್ತು ಅವರ ತಂಡ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ರೋಚಕ ವಿಚಾರವನ್ನು ಸ್ವತಃ ನಟ ಅರ್ನಾಲ್ಡ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಟ್ವಿಟ್ಟರ್ ನಲ್ಲಿ ಆನೆ ಅಟ್ಟಾಡಿಸಿದ ರೋಚಕ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.
ಆಫ್ರಿಕಾದ ಸಫಾರಿ ವಾಹನದಲ್ಲಿ ಕುಳಿತಿದ್ದ ಅರ್ನಾಲ್ಡ್ ಆನೆಯನ್ನು ಕಂಡ ಕೂಡಲೇ ವಿಡಿಯೋ ಮಾಡಲು ಆರಂಭಿಸಿದ್ದಾರೆ. ಕೆಲಕಾಲ ಸುಮ್ಮನಿದ್ದ ಆನೆ ಬಳಿಕ ಪಕ್ಕಕ್ಕೆ ಸರಿದು ಹೋಗುತ್ತಿರುವಂತೆಯೇ ಅರ್ನಾಲ್ಡ್ ಇದ್ದ ಜೀಪ್ ಅನ್ನು ಬೆನ್ನಟ್ಟಿದೆ. ಆನೆ ತಮ್ಮ ಜೀಪ್ ಅನ್ನು ಬೆನ್ನಟ್ಟಿದ ವಿಚಾರ ತಿಳಿಯುತ್ತಿದ್ದಂತೆಯೇ ಜೀಪ್ ಚಾಲಕ ವೇಗವಾಗಿ ಗಾಡಿ ಓಡಿಸುವ ಮೂಲಕ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ.
ಬಳಿಕ ಸಫಾರಿ ವೇಳೆ ಆಫ್ರಿಕಾದ ದೈತ್ಯ ಸಿಂಹಗಳನ್ನು ಭೇಟಿಯಾಗಿರುವ ಅರ್ನಾಲ್ಡ್ ಆ ಚಿತ್ರವನ್ನು ಕೂಡ ಶೇರ್ ಮಾಡಿದ್ದಾರೆ. "ತಮ್ಮ ಆಫ್ರಿಕಾ ಸಫಾರಿಯ ರೋಚಕ ಅನುಭವವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ನಟ ಅರ್ನಾಲ್ಡ್, ಈ ದೈತ್ಯ ಸುಂದರ ಪ್ರಾಣಿಗಳನ್ನು ನೋಡಿ ನಾನು ನಿಜಕ್ಕೂ ವಿಸ್ಮಯಗೊಂಡಿದ್ದೆ. ಇಂತಹ ದೈತ್ಯ ಸುಂದರ ಪ್ರಾಣಿಗಳನ್ನು ದಂತಕ್ಕಾಗಿ ಕೊಲ್ಲಬಾರದು ಎಂದು ಅರ್ನಾಲ್ಡ್ ಟ್ವೀಟ್ ಮಾಡಿದ್ದಾರೆ.