ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಅಭಿನಯದ ಬಹು ನಿರೀಕ್ಷಿತ ಉಡ್ತಾ ಪಂಜಾಬ್ ಚಿತ್ರ ಕುರಿತು ಎದ್ದಿರುವ ವಿವಾದ ಕುರಿತ ವಿಚಾರಣೆಯನ್ನು ಬಾಂಬೆ ಹೈ ಕೋರ್ಟ್ ಮುಂದೂಡಿದ್ದು, ಜೂ.13ಕ್ಕೆ ಆದೇಶ ನೀಡುವುದಾಗಿ ತಿಳಿಸಿದೆ.
ಉಡ್ತಾ ಪಂಜಾಬ್ ಸಿನಿಮಾ ಕುರಿತು ಉಂಟಾಗಿರುವ ವಿವಾದದ ಕುರಿತು ಫ್ಯಾಂಟಮ್ ಫಿಲ್ಸ್ಮ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್, ಸೆನ್ಸಾರ್ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಮಲ್ಟಿಪ್ಲೆಕ್ಸ್'ಗೆ ಬರುವ ಬಹುತೇಕ ಮಂದಿ ಫ್ರೌಢಾವಸ್ಥೆಗೆ ಬಂದಿರುವ ಜನರಾಗಿರುತ್ತಾರೆ. ತಾವು ಏನನ್ನು ನೋಡಬೇಕೆಂಬ ಆಯ್ಕೆಯನ್ನು ಜನರಿಗೆ ಕೊಡಬೇಕೆಂದು ಹೇಳಿದೆ.
ವಿಚಾರಣೆ ವೇಳೆ ಸಿಬಿಎಫ್ ಸಿ ಪರ ವಕೀಲರು ವಾದ ಮಂಡಿಸಿದ್ದು, ಸಿನಿಮಾದಲ್ಲಿ ಕೆಲವು ನಿಂದನೆ ಹಾಗೂ ಅಕ್ಷೇಪಣಾರ್ಹ ಪದಗಳಿವೆ. ಇನ್ನು ಕೆಲವು ದೃಶ್ಯಗಳು ಅಸಭ್ಯತೆಯಿಂದ ಕೂಡಿದ್ದು ಅವುಗಳಿಗೆ ಕತ್ತರಿ ಹಾಕುವಂತೆ ತಿಳಿಸಲಾಗಿತ್ತು. ಸಿನಿಮಾದಲ್ಲಿ ನಾಯಿಯೊಂದಕ್ಕೆ ಜಾಕಿ ಚಾನ್ ಹೆಸರಿಟ್ಟಿದ್ದು, ಇದರಿಂದ ವಿವಾದ ಏಳುವ ಸಾಧ್ಯತೆಗಳಿವೆ ಎಂದು ಹೇಳಿದೆ.
ಈ ವೇಳೆ ಮಾತನಾಡಿರುವ ನ್ಯಾಯಾಲಯವು ಸಿನಿಮಾ ಬಗ್ಗೆ ಈ ರೀತಿಯಾದ ಬೆಳವಣಿಗೆಗಳು ಸಿನಿಮಾಗೆ ಪ್ರಚಾರ ನೀಡಿದಂತಾಗುತ್ತೆ. ಮಲ್ಪಿಪ್ಲೆಕ್ಸ್ ಗೆ ಬರುವ ಬಹುತೇಕ ಜನರು ಫ್ರೌಡಾವಸ್ಥೆಗೆ ಬಂದಿರುವ ಜನರೇ ಆಗಿರುತ್ತಾರೆ. ಚಿತ್ರವನ್ನು ಟಿವಿಯಲ್ಲಿ ಅಥವಾ ಚಿತ್ರಮಂದಿರದಲ್ಲಿ ನೋಡಬೇಕೆಂಬುದು ಜನರ ಆಯ್ಕೆಗೆ ಬಿಟ್ಟ ವಿಚಾರ. ಪ್ರತಿಯೊಬ್ಬರಿಗೂ ಆಯ್ಕೆಯೆಂಬುದಿರುತ್ತದೆ. ಈ ಕುರಿತ ಆಯ್ಕೆಯನ್ನು ಜನರಿಗೇ ಬಿಡಿ ಎಂದು ಹೇಳಿದೆ. ಅಲ್ಲದೆ, ವಿಚಾರಣೆಯನ್ನು ಮುಂದೂಡಿದ್ದು, ಚಿತ್ರ ಕುರಿತ ಆದೇಶವನ್ನು ಜೂ.13ಕ್ಕೆ ಹೊರಡಿಸಲಾಗುತ್ತದೆ ಎಂದು ಹೇಳಿದೆ.