ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಾಕಷ್ಟು ಡಿಫರೆಂಟ್ ಸಿನಿಮಾಗಳನ್ನು ಕೊಡುತ್ತಲ್ಲೇ ಬಂದಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಇದೀಗ 'ಉಪ್ಪಿ ಮತ್ತೆ ಹುಟ್ಟಿ ಬಾ - ಇಂತಿ ಪ್ರೇಮ' ಚಿತ್ರ ಮಾಡುತ್ತಿರುವುದು ಹಾಗೂ ನಟಿ ಪ್ರೇಮಾ ಅವರು ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇತ್ತೀಚೆಗೆ ಹೊರ ಬಿದ್ದಿರುವ ಸುದ್ದಿ ಏನೆಂದರೆ, ಚಿತ್ರದಲ್ಲಿ ಶ್ರುತಿ ಹರಿಹರನ್ ಕೂಡ ನಟಿಸುತ್ತಿದ್ದಾರೆಂಬುದು.
ಈಗಾಗಲೇ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಯಶಸ್ಸಿನ ಮೂಲಕ ಗೆಲವಿನ ನಗೆ ಬೀರಿರುವ ಶ್ರುತಿ ಹರಿಹರನ್ ಅವರು ಉಪ್ಪಿಯ 'ಉಪ್ಪಿ ಮತ್ತೆ ಹುಟ್ಟಿ ಬಾ' ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ನಾನೊಬ್ಬಳು ನಟಿಯೇ ಹೊರತು ಹಿರೋಯಿನ್ ಎಂಬ ವಸ್ತುವಲ್ಲ. ಎಲ್ಲಾ ರೀತಿಯ ಚಿತ್ರದಲ್ಲೂ ಹೊಸ ಪ್ರಯೋಗಗಳನ್ನು ಮಾಡಲು ಇಚ್ಛಿಸುತ್ತೇನೆ. ಇದು ಉತ್ತಮ ಸಿನಿಮಾ ಎಂಬ ನಂಬಿಕೆಯಿದೆ. ಒಬ್ಬ ದೊಡ್ಡ ನಟನೊಂದಿಗೆ ನಟಿಸುವ ಉತ್ತಮ ಅವಕಾಶ ನನಗೆ ಸಿಕ್ಕಿದೆ ಎಂದು ಶ್ರುತಿ ಹರಿಹರನ್ ಹೇಳಿಕೊಂಡಿದ್ದಾರೆ.
ಉಪೇಂದ್ರ ಅವರ ಉಪ್ಪಿ ಮತ್ತೆ ಹುಟ್ಟಿ ಬಾ ಚಿತ್ರಕ್ಕೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಚಿತ್ರದ ತಂಡ ಮಾಡಿಕೊಳ್ಳುತ್ತಿದ್ದು, ಜೂ.19ಕ್ಕೆ ಚಿತ್ರಕ್ಕೆ ಮುಹೂರ್ತವನ್ನು ನಿರ್ಧರಿಸಲಾಗಿದೆ. ಚಿತ್ರೀಕರಣವನ್ನು ಜೂನ್ 24 ರಿಂದ ಆರಂಭಿಸಲು ತಂಡ ನಿರ್ಧರಿಸಿದೆ.
ಚಿತ್ರವನ್ನು ಶ್ರೀರಾಮ ಅವರು ನಿರ್ಮಾಣ ಮಾಡುತ್ತಿದ್ದು, ಶ್ರೀಧರ್ ವಿ ಸಂಭ್ರಮ್ ಅವರು ಸಂಗೀತ ನಿರ್ದೇಶರಾಗಿ ಹಾಗೂ ಸ್ವಾಮಿ. ಜೆ ಅವರು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.