ನವದೆಹಲಿ: ಗಾಯಕ ಅರಿಜಿತ್ ಸಿಂಗ್ ಕುರಿತಂತೆ ಇದೇ ಮೊದಲ ಬಾರಿಗೆ ತುಟಿಬಿಚ್ಚಿ ಮಾತನಾಡಿರುವ ನಟ ಸಲ್ಮಾನ್ ಖಾನ್ ಅವರು ಗಾಯಕರ ಆಯ್ಕೆ ನಿರ್ಮಾಪಕರಿಗೆ ಬಿಟ್ಟಿದ್ದು, ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತಂತೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಗಾಯಕನ ಆಯ್ಕೆ ವಿಚಾರ ನಿರ್ಮಾಪಕರಿಗೆ ಬಿಟ್ಟಿದ್ದು, ಇದರಲ್ಲಿ ನನ್ನ ಪಾತ್ರವಿರುವುದಿಲ್ಲ. ಯಾವುದೇ ಸಿನಿಮಾದಲ್ಲಿಯಾದರೂ ಸಾಕಷ್ಟು ಗಾಯಕರು ಹಾಡುಗಳನ್ನು ಹಾಡಿರುತ್ತಾರೆ. ಅಂತಿಮದಲ್ಲಿ ನಿರ್ದೇಶಕರು ಹಾಗೂ ನಿರ್ಮಾಪಕರು ಯಾವ ಧ್ವನಿ ಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ನನ್ನ ಪಾತ್ರವಿರುವುದಿಲ್ಲ.
ಸುಲ್ತಾನ್ ಚಿತ್ರದಲ್ಲಿ ನಾನು ಕೂಡ ಒಂದು ಹಾಡನ್ನು ಹಾಡಿದ್ದೆ, ಆದರೆ, ಅದನ್ನು ತಿರಸ್ಕರಿಸಲಾಗಿದೆ. ಹಾಗೆಂದ ಮಾತ್ರಕ್ಕೆ ನಾನು ಬೇಸರಗೊಂಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಇದೇ ವೇಳೆ ಅರಿಜಿತ್ ಅವರ ಪೋಸ್ಟ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಅವರ ಉದ್ದೇಶ ನನಗೆ ಅರ್ಥವಾಗಿದೆ. ಈ ರೀತಿಯಾಗಿ ಯಾಕೆ ಬರೆಯಬೇಕಿತ್ತು ಎಂದು ಹೇಳಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ನಡೆದಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನ್ ಗೆ ಅರಿಜಿತ್ ಸಿಂಗ್ ಅವರು ತಮ್ಮ ಗಾಯನದ ಮೂಲಕ ಮುಜುಗರ ಉಂಟು ಮಾಡಿದ್ದರು. ಇದಕ್ಕೆ ಸಲ್ಮಾನ್ ಅಭಿಮಾನಿಗಳು ವ್ಯಾಪಕ ಟೀಕೆ ಹಾಗೂ ವಿರೋಧಗಳನ್ನು ವ್ಯಕ್ತಪಡಿಸಿದ್ದರು. ನಂತರ ಅರಿಜಿತ್ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ವೊಂದನ್ನು ಹಾಕಿ ಕ್ಷಮೆಯಾಚಿಸಿದ್ದರು.