ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ತಮ್ಮ ಮುಂದಿನ ಚಿತ್ರ 'ಕಿಚ್ಚು'ಗಾಗಿ ತನುಮನವನ್ನೆಲ್ಲಾ ಅರ್ಪಿಸಿದ್ದಾರೆ. ಪ್ರದೀಪ್ ರಾಜ್ ನಿರ್ದೇಶನದ ಈ ಚಿತ್ರಕ್ಕೆ ಗ್ಲ್ಯಾಮರ್ ನಿಂದ ಹೊರಬಂದಿರುವ ನಟಿ, ಸಂಕೇತ ಭಾಷೆಯನ್ನು ಕೂಡ ಕಲಿತಿದ್ದಾರಂತೆ.
"ಸಿನೆಮಾದಲ್ಲಿ ನನ್ನ ಜೋಡಿ ಧ್ರುವ ಮತ್ತು ನನ್ನ ಸಹೋದರಿಯ ಪಾತ್ರ ನಿರ್ವಹಿಸುತ್ತಿರುವ ನಾಟಿಗೆ ವಾಕ್- ಶ್ರವಣ ದೋಷ ಇದೆ. ಚಿತ್ರೀಕರಣ ವೇಳೆಯಲ್ಲಿ ಅವರ ಜೊತೆಗೆ ಸಂವಹನ ಸಾಧಿಸಲು ನನಗೆ ಸಂಕೇತ ಭಾಷೆ ಕಲಿಯಬೇಕಾಗಿತ್ತು. ಅದನ್ನು ಸಿನೆಮಾದಲ್ಲೂ ಬಳಸಿದ್ದೇವೆ" ಎನ್ನುತ್ತಾರೆ ರಾಗಿಣಿ.
ರಾಗಿಣಿ ಎರಡೂ ವರೆ ವಾರಗಳ ಕಾಲ ಸಂಕೇತ ಭಾಷೆ ಕಲಿತಿದ್ದು ಧ್ರುವ್ ಅವರಿಂದಲೂ ಸಲಹೆಗಳನ್ನು ಪಡೆದಿದ್ದಾರಂತೆ. "ಸಿನಿಮಾದಲ್ಲಿರುವ ಧ್ರುವ್ ಪಾತ್ರ ನಿಜ ಜೀವನದಲ್ಲಿದ್ದಂತೆಯೇ. ನಮ್ಮಿಬ್ಬರನ್ನು ತೆರೆಯ ಮೇಲೆ ಕಾಣಲು ಹವಣಿಸುತ್ತಿದ್ದೇವೆ ಏಕೆಂದರೆ ನಮ್ಮಿಬರ ನಡುವೆ ವಿಭಿನ್ನ ರೀತಿಯ ಕೆಮಿಸ್ಟ್ರಿ ಇದೆ" ಎನ್ನುತ್ತಾರೆ ರಾಗಿಣಿ.
ಚಿಕ್ಕಮಗಳೂರು ಸಂತೆಯಲ್ಲಿ ಈ ಸಿನೆಮಾದ ಕೆಲವು ದೃಶ್ಯಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಾಗಿಣಿ "ಕರ್ನಾಟಕ ಈ ಭಾಗದ ಜನರ ಜೀವನ ಶೈಲಿ ವಿಭಿನ್ನವಾಗಿದೆ. ಈ ಭಾಗದಲ್ಲಿ ನಾನು ಕಳೆದ ಕಡಿಮೆ ಸಮಯದಲ್ಲೇ ಅಲ್ಲಿನ ಜನರ ಮುಗ್ಧತೆ ಮತ್ತು ಶಕ್ತಿಯ ಅನಾವರಣ ನನಗಾಯಿತು. ನಗರ ಜೀವನದ ಮಹಿಳೆಯರು ಹೆಚ್ಚು ಕೆಲಸ ಮಾಡುತ್ತಾರೆ ಎಂದು ನಾವು ತಿಳಿದಿರುತ್ತೇವೆ ಆದರೆ ಇಲ್ಲಿನ ಭಾಗದ ಮಹಿಳೆಯರು 14 ಘಂಟೆಗೂ ಹೆಚ್ಚು ಕಾಲ ದುಡಿಯುತ್ತಾರೆ" ಎನ್ನುತ್ತಾರೆ ರಾಗಿಣಿ.
ಕಾಫಿ ಎಸ್ಟೇಟ್ ಕೆಲಸಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಗಿಣಿ "ಕಾಫಿ ಎಸ್ಟೇಟ್ ಕೆಲಸಗಾರರ ವಿವಿಧ ಮುಖಗಳನ್ನು ಸೆರೆಹಿಡಿದು ಅವರ ಜೀವನವನ್ನು ಈ ಸಿನೆಮಾ ಚರ್ಚಿಸುತ್ತದೆ" ಎನ್ನುತ್ತಾರೆ ನಟಿ.
ಸದ್ಯಕ್ಕೆ ಮಳೆ ನಿಲ್ಲುವುದಕ್ಕೆ ಕಾಯುತ್ತಿರುವ ಚಿತ್ರತಂಡ, ಚಿತ್ರೀಕರಣವನ್ನು ಪುನರಾರಂಭಿಸುವ ಉತ್ಸಾಹದಲ್ಲಿದೆ.