ಬೆಂಗಳೂರು: ಗಟ್ಟಿ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ನಟಿ ರಾಧಿಕಾ ಪಂಡಿತ್ ಅವರಿಗೆ ಪ್ರತಿ ಸಿನೆಮಾದಲ್ಲೂ ವೃತ್ತಿಪರವಾಗಿ ಹೆಚ್ಚಿನದನ್ನು ಸಾಧಿಸುವ ತವಕ. ತಮ್ಮ ಗಂಭೀರ ಅಭಿನಯಕ್ಕೆ ಹೆಸರಾದ ನಟಿ ಮುಂದಿನ ಸಿನೆಮಾ 'ಜೂಮ್' ನಲ್ಲಿ ಗಂಭೀರ ಮತ್ತು ಹಾಸ್ಯವನ್ನು ಹದವಾಗಿ ಮಿಶ್ರಣ ಮಾಡಿ ನಟಿಸಿದ್ದಾರಂತೆ.
ಮೊದಲ ಬಾರಿಗೆ ಹಾಸ್ಯ ಪಾತ್ರದ ಅಭಿನಯಕ್ಕೆ ಒಡ್ಡಿಕೊಂಡಿರುವುದಾಗಿ ತಿಳಿಸುವ ಅವರು ಈ ಹಿಂದೆ ತೆರೆಯ ಮೇಲೆ ಎಂದಿಗೂ ತಾಮಾಷೆಯಾಗಿ ಕಾಣಿಸಿಕೊಂಡಿಲ್ಲ ಮತ್ತು ಅಂತಹ ಪಾತ್ರ ಸಿಕ್ಕೇ ಇಲ್ಲ ಎನ್ನುತ್ತಾರೆ. "ಹಾಸ್ಯ ತುಸು ಕಷ್ಟದ ವಿಭಾಗ. 'ಜೂಮ್' ಚಿತ್ರೀಕರಣದ ನಂತರ ಅದು ನನಗೆ ತಿಳಿಯಿತು. ನನ್ನ ಬಳಿ ಸ್ಕ್ರಿಪ್ಟ್ ಬಂದಾಗ ನಾನು ಆತ್ಮವಿಶ್ವಾಸದಿಂದ ಇದ್ದೆ ಏಕೆಂದರೆ ಪ್ರಶಾಂತ್ ರಾಜ್ ಬಗ್ಗೆ ನನಗೆ ಆಪ್ತತೆಯಿತ್ತು. ಅಲ್ಲದೆ ಅವರ 'ಲವ್ ಗುರು' ಮತ್ತು 'ಗಾನ ಬಜಾನಾ' ಸಿನೆಮಾಗಳಲ್ಲಿ ನಟಿಸಿದ್ದೆ ಎನ್ನುವ ನಟಿ, ಗಣೇಶ್, ಸಾಧು ಕೋಕಿಲಾ ಮತ್ತು ಹಿರಿಯ ನಟ ಕಾಶಿನಾಥ್ ಅವರು ಸುತ್ತುವರೆದಿದ್ದ ಸೆಟ್ ನಲ್ಲಿ ಹಾಸ್ಯ ಹಾಸುಹೊಕ್ಕಿತ್ತು ಎನ್ನುತ್ತಾರೆ.
ಈ ಸಿನೆಮಾದಲ್ಲಿ ನಟಿಸಲು ಹೆಚ್ಚು ಅವಕಾಶ ಇತ್ತು ಎನ್ನುವ ಅವರು "ನನ್ನ ಸಿನೆಮಾಗಳ ಪಟ್ಟಿಯನ್ನು ಗಮನಿಸಿದರೆ, ನನಗೆ ನಟಿಸುವ ಅವಕಾಶ ಇಲ್ಲದ ಸಿನೆಮಾಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಯುತ್ತದೆ. ನನ್ನ ಪಾತ್ರದ ಸಮಯದ ಬಗ್ಗೆ ನನಗೆ ಹೆಚ್ಚು ತಕರಾರಿಲ್ಲ ಆದರೆ ಸ್ಕ್ರಿಪ್ಟ್ ಗೆ ಆ ಪಾತ್ರದ ಅವಶ್ಯಕತೆ ಇರಬೇಕು. 'ಜೂಮ್' ಅಂತಹ ಒಂದು ಚಿತ್ರ" ಎನ್ನುತ್ತಾರೆ ರಾಧಿಕಾ.
'ಜೂಮ್' ಸಿನೆಮಾದಲ್ಲಿ ಮಾಡಿದ ಪಾತ್ರ ತಮ್ಮ ನಿಜಜೀವನಕ್ಕೆ ಬಹಳ ಹತ್ತಿರ ಎನ್ನುವ ನಟಿ "ನೈನಾ ಪಾತ್ರಕ್ಕೂ ನನ್ನ ಜೀವನಕ್ಕೂ ಬಹಳ ಹೋಲಿಕೆಯಿದೆ. ನನಗೆ ಕೆಲವು ಸಂಗತಿಗಳು ನಿಧಾನವಾಗಿ ದಕ್ಕಿದ್ದರು, ನನ್ನ ಶ್ರಮ ಫಲ ನೀಡಿರುವುದಕ್ಕೆ ಸಂತಸವಿದೆ. ಈ ಸಿನೆಮಾದ ಪಾತ್ರ ನಾನೇ" ಎನ್ನುತ್ತಾರೆ.
ಗಣೇಶ್ ಅವರ ಹಾಸ್ಯ ಟೈಮಿಂಗ್ ಬಗ್ಗೆ ಹೊಗಳುವ ನಟಿ "ಅವರ ನಟನೆಗೆ ನಮ್ಮ ನಟನೆಯನ್ನು ಸರಿದೂಗಿಸಲು ಸದಾ ಎಚ್ಚರದಿಂದಿರಬೇಕು. ಅವರ ನಿಜ ಜೀವನದಲ್ಲೂ ಹಾಸ್ಯಮಯ ವ್ಯಕ್ತಿ. ಸದಾ ನಗುನಗುತ್ತಲೇ ಓಡಾಡಿಕೊಂಡಿರುವ ವ್ಯಕ್ತಿ. ಅಂತಹ ನಟನೊಂದಿಗೆ ನಟಿಸುವುದು ಸುಲಭ" ಎನ್ನುತ್ತಾರೆ.
ಮೊದಲ ಬಾರಿಗೆ 'ಜೂಮ್' ನಲ್ಲಿ ರಾಧಿಕಾ ಹಾಡೊಂದನ್ನು ಹಾಡಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos